Monday, August 31, 2009

ಚಾತುರ್ಮಾಸ

ಚಾತುರ್ಮಾಸ ಬಂದರೆ ಸಾಕು, ಹಬ್ಬ ಹರಿದಿನಗಳು ಶುರು, ಮುಹೂರ್ತಗಳು ಹೆಚ್ಚು, ಎಲ್ಲೆಲ್ಲೂ ಸಡಗರವೆ. ಅದಕ್ಕೆ ಜೋಡಿಸಿಕೊಂಡು, ನನಗೆ ಆಫೀಸಿನಲ್ಲಿ ಕೆಲಸವೂ ಹೆಚ್ಚು. ಇನ್ನು ಪಿತೃ ಪಕ್ಷ ಬಂದರೆ ಕೇಳುವುದೇ ಬೇಡ. ಇರುವವರನ್ನು ಬಿಟ್ಟು ಇಲ್ಲದಿರುವವರನ್ನು ನೆನೆಸುವುದೇ ಈ ಪಕ್ಷದ ಮಹಿಮೆ. ಅದು ಮಾಡಬಾರದು, ಇದು ಮಾಡಬಾರದು ಎಂಬ ನಿರ್ಬಂಧ ಬೇರೆ. ಪಕ್ಷದಲ್ಲಿ ಅಪ್ಪನಿಗೆ ದಿನವೂ ಫಲಹಾರ ಆಗಬೇಕು. ಒಂದೇ ವೇಳೆ ಊಟ. ಅದರಲ್ಲೂ ಕೆಲವೊಂದು ತರಕಾರಿಗಳು ಉಪಯೋಗಿಸುವಹಾಗಿಲ್ಲ. ಅಯ್ಯೋ ಯಾವಾಗಾದ್ರೂ ಮುಗಿಯತ್ತೋ ಈ ಪಕ್ಷ ಅಂತ ಅಮ್ಮ ಕಾಯ್ತಿರ್ತಾರೆ.


ಈ ಚಾತುರ್ಮಾಸದಲ್ಲಿ ನಮ್ಮ ಮಠದ ಸ್ವಾಮಿಗಳು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಮಠಗಳಲ್ಲಿ ಒಂದು ನಿಯಮ ಇದೆ. ಸನ್ಯಾಸಿಗಳು ಚಾತುರ್ಮಾಸದಲ್ಲಿ ಪ್ರಯಾಣ ಮಾಡಬಾರದು. ಚಾತುರ್ಮಾಸದ ೨ ತಿಂಗಳ ಅವಧಿಯಲ್ಲಿ ಒಂದೇ ಕಡೆಯಲ್ಲಿ ಇರಬೇಕು (ಚಾತುರ್ಮಾಸ ಅಂದ್ರೆ ೪ ತಿಂಗಳಲ್ವಾ ಅಂತ ಕೇಳಬೇಡಿ. ೪ ತಿಂಗಳು ಒಂದೇ ಕಡೆ ಇರಲು ಆಗದೆ ಇದ್ದಲ್ಲಿ, ೪ ಪಕ್ಷಗಳ ಕಾಲ ಚಾತುರ್ಮಾಸ ವ್ರತವನ್ನು ಅನುಷ್ಠಾನಗೊಳಿಸುತ್ತಾರೆ). ಸ್ವಾಮಿಗಳು ಇದಾರಲ್ಲ ಅಂತ ಆಗಾಗ ಮಠಕ್ಕೆ ಹೋಗಿಬರುತ್ತೇನೆ. ರಿಸಿಶನ್ ಟೈಮ್ ನೋಡಿ, ಇದನೆಲ್ಲ ಸ್ವಲ್ಪ ಹೆಚ್ಚು ಪಾಲಿಸಬೇಕು. ಸಂಕಟ ಬಂದಾಗ ವೆಂಕಟರಮಣ ಅಂತ ಕೇಳಿಲ್ವೇ?


ಸಾಮಾನ್ಯವಾಗಿ ತಿನ್ನುವ ವಿಚಾರದಲ್ಲಿ ನಾನು ಸ್ವಲ್ಪ choosy. ಕೆಲವೊಂದು ತರಕಾರಿಗಳನ್ನು ಬಿಟ್ಟರೆ ಬೇರೆ ಯಾವುದನ್ನು ಮುಟ್ಟುವುದಿಲ್ಲ. ತುಪ್ಪದಿಂದ ಮಾಡಿದ ಸಿಹಿ ಅಂದ್ರೆ ದೂರ ಓದ್ತೀನಿ. ಚಿಕ್ಕ ವಯಸ್ಸಿನಿಂದ ಅಭ್ಯಾಸವಾಗಿರುವುದರಿಂದ ಅಮ್ಮ ಮಾಡಿದ ಸಿಹಿಗಳು ಮಾತ್ರ ತಿಂತೀನಿ. ಆದ್ರೆ ಮಠಕ್ಕೆ ಹೋದಾಗೆಲ್ಲಾ ಅಲ್ಲೇ ಊಟ. ತುಪ್ಪ ಸೋರುತ್ತಿರುತ್ತದೆ. ಆದರೂ ಬೇಸರವಿಲ್ಲದೆ ಅಲ್ಲಿ ಮಾಡಿದ ಊಟ ಮಾತ್ರ ಹೊಟ್ಟೆ ಸೇರುತ್ತದೆ. ಹೇಗೆ ಅಂತ ನನಗೂ ತಿಳಿಯದ ವಿಷಯ. ಮೊನ್ನೆ ಮಠದಲ್ಲಿ ಊಟ ಹೀಗಿತ್ತು - ಅನ್ನ, ಸೌತೆಕಾಯಿ ಕೂಟು, ಸೀ ಕುಂಬಳಕಾಯಿ ಹುಳಿ, ಸುವರ್ಣಗೆಡ್ಡೆ ಪಲ್ಯ, ಮೆಣಸಿನ ಸಾರು, ಸಜ್ಜಪ್ಪ, ಮೊಸರು. ಇದರಲ್ಲಿ ಸಾಮಾನ್ಯವಾಗಿ ಮೆಣಸಿನ ಸಾರು, ಮೊಸರು ಬಿಟ್ಟರೆ ಯಾವುದೂ ಹಿಡಿಸುವುದಿಲ್ಲ. ಆದರೆ ಮಠದಲ್ಲಿ ಎಲ್ಲವೂ ರುಚಿಯೇ. ಎಲೆಯಲ್ಲಿ ಸ್ವಲ್ಪವೂ ಮಿಗಿಸದೆ, ತಿಂದಿದ್ದೆ. ಮಠದಲ್ಲಿ ತಿಳಿದವರು ಒಬ್ಬರು, ಸ್ವಲ್ಪ ಸಜ್ಜಪ್ಪವನ್ನು ಮನೆಗೂ ಪಾರ್ಸೆಲ್ ಮಾಡಿಕೊಟ್ಟರು. ಆದರೆ, ಮನೆಯಲ್ಲಿ ಅದು ಬೇಡವಾಗಿಹೋಯಿತು. ಏನು ವಿಚಿತ್ರ ಅಲ್ವ?


ಇನ್ನು ಈ ಸಲದ ಚಾತುರ್ಮಾಸ ನನಗೆ ಇನ್ನೂ ಸ್ಪೆಷಲ್. ಅಪ್ಪನಿಗೆ ೬೦ ವರುಷ ತುಂಬಿತು. ೨ ದಿನ ಆಫೀಸಿಗೆ ಚಕ್ಕರ್ ಹೊಡ್ದು, ಅಪ್ಪ ಅಮ್ಮನಿಗೆ ಮತ್ತೊಮ್ಮೆ ಮದುವೆ ಮಾಡಿಸಿಯಾಯಿತು. ಅವರ ಮೊದಲನೇ ಮದುವೆ ನಾನು ನೋಡಿರ್ಲಿಲ್ವಲ್ಲ ಅದಕ್ಕೆ ;-)


೪ ದಿನ ಆದ್ಮೇಲೆ ಆಫೀಸಿಗೆ ಬಂದಿದೀನಿ ಇವತ್ತು. ಪ್ರತೀ ಸೋಮವಾರ ಇರುವ ಮಂಡೆ ಬ್ಲೂಸ್ ಜೊತೆಗೆ, ೪ ದಿನಗಳಿಂದ ಬರದ ಕಾರಣದಿಂದ ಕೆಲಸದ ದಿನಚರಿಗೆ ಮನಸ್ಸು ಇನ್ನೂ ಒಗ್ಗಿಲ್ಲ. ಅದಕ್ಕೇ ಇದನ್ನ ಬರಿತಾ ಇದ್ದೀನಿ.

Thursday, August 13, 2009

ಬಾಳಿಗೊಂದು ನಂಬಿಕೆ



ಮೊನ್ನೆ ಭಾನುವಾರ ಮನೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು. ಅದರ ಹಿಂದಿನ ದಿನ ನಾನು ತರಕಾರಿ ಮಾತು ಇನ್ನಿತರ ಸಾಮಾನು ತರಲು ಮಾರುಕಟ್ಟೆಗೆ ಹೋದೆ. ನಾಲ್ಕೈದು ಅಂಗಡಿಗಳಿಗೆ ಬೇಟಿ ಕೊಟ್ಟು ಚೌಕಾಸಿ ಮಾಡಿ ತರಕಾರಿ ಕೊಂಡಾಯಿತು. ಚೀಲವನ್ನು ಅಲ್ಲೇ ಒಂದು ಅಂಗಡಿಯಲ್ಲಿ ಇಟ್ಟು, ಅಡಿಕೆ ಪಟ್ಟೆಗಳನ್ನು (ಅಡಿಕೆ ಎಲೆಗಳಿಂದ ಮಾಡಿದ ತಟ್ಟೆ) ಕೊಂಡುಕೊಳ್ಳಲು ಹೋದೆ.

ಆ ಅಂಗಡಿಯಲ್ಲಿ ಇದ್ದಿದ್ದು ಒಬ್ಬಳು ಮಹಿಳೆ, ಸುಮಾರು ೨೫-೨೬ ವರ್ಷ ಇರಬಹುದೇನೋ. ಕೈಯಲ್ಲಿ ಸುಮಾರು ಒಂದು ವರುಷದ ಮಗು, ಕಾಲ ಬುಡದ ಹತ್ತಿರ ಮತ್ತೊಂದು ಮಗು, ಸುಮಾರು ೩ ವರುಷ ವಯಸ್ಸಿನ ಹುಡುಗಿ. ಅಂಗಡಿಯಲ್ಲಿ ಬೇರೆ ಯಾರು ಇರಲಿಲ್ಲ. ಅಂಗಡಿಯ ಜವಾಬ್ದಾರಿಯೆಲ್ಲವೂ ಆಕೆಗೇ. ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾಳೆ ಭೇಷ್ ಅನಿಸಿತು.
ಅಡಿಕೆ ಪಟ್ಟೆಗಳನ್ನು ನೋಡಿ, ಬೆಲೆ ವಿಚಾರಿಸಿ, ದೊಡ್ಡ ಗಾತ್ರದ ಪಟ್ಟೆಗಳನ್ನು ಕೊಂಡುಕೊಳ್ಳುವೆ, ೨೦೦ ಪಟ್ಟೆಗಳು ಬೇಕು ಎಂದೆ.
"ಬ್ಯಾಗ್ ಇದೆಯಾ ಅಣ್ಣ?" ಎಂದಳು.
"ಇಲ್ಲ ೨೦೦ ಪಟ್ತೆಗಳಿಗೆ ಬಾಗ್ ಸಾಕಾಗುವುದಿಲ್ಲ. ಒಂದು ಗೋಣಿಚೀಲದಲ್ಲಿ ಹಾಕಿ ಕೊಡು."
"ಸೆರಿ ಅಣ್ಣ."

ಪಟ್ಟೆಗಳು ಇಟ್ಟಿದ್ದ ಸ್ಥಳ ನನಗೆ ಕಾಣಿಸುತ್ತಿರಲಿಲ್ಲ. ಒಂದು ಪರದೆ ಅಡ್ಡ ಇತ್ತು. ಒಂದು ಪಟ್ಟೆಯ ಗಂಟನ್ನು ತೋರಿಸಿ, ಆ ತರಹದ ಪಟ್ಟೆಗಳನ್ನು ಹಾಕು ಎಂದು ಹೇಳಿದೆ. ಒಂದು ಗೋಣಿಚೀಲದಲ್ಲಿ ಹಾಕಿ ಚೀಲದ ಬಾಯನ್ನು ಕಟ್ಟುತ್ತಿದ್ದಾಗ -

"ಏನಮ್ಮ ಇದರಲ್ಲಿ ೨೦೦ ಪಟ್ಟೆಗಳು ಇದೆಯಾ?" ಎಂದು ಕೇಳಿದೆ.
"ಹು ಅಣ್ಣ. ನೀವೇ ಒಂದು ಸಲ ನೋಡ್ಬಿಡಿ ಬೇಕಿದ್ದರೆ."
"ಪರವಾಗಿಲ್ಲ ಬಿಡು. ನಿನ್ನನ್ನ ನಂಬ್ತೀನಿ."

ಎಲ್ಲವನ್ನೂ ಕೊಂಡು, ಚೀಲವನ್ನು ನನ್ನ ಬೈಕಿನ ಹಿಂಬಾಗಕ್ಕೆ ಕಟ್ಟಿ, ಮನೆಗೆ ಬಂದದ್ದೇ ಒಂದು ಸಾಹಸ. ಸ್ವಲ್ಪ ಹೊತ್ತು ನಂತರ, ಚೀಲವನ್ನು ಬಿಚ್ಚಿ ಅಡಿಕೆ ಪಟ್ಟೆಗಳನ್ನು ತೆಗೆದಾಗ, ನನಗೆ ಎಲ್ಲಿಲ್ಲದ ಕೋಪ. ದೊಡ್ಡ ಗಾತ್ರದ ೨೦೦ ಪಟ್ಟೆಗಳನ್ನು ಕೇಳಿದರೆ, ಅಲ್ಲಿ ಇದ್ದದ್ದು ೯೦ ದೊಡ್ಡ ಗಾತ್ರದ ಮತ್ತು ೭೫ ಸ್ವಲ್ಪ ಚಿಕ್ಕದಾದ ಪಟ್ಟೆಗಳು. ಈ ಲೋಕದಲ್ಲಿ ನಂಬಿಕೆಗೆ ಬೆಲೆಯೇ ಇಲ್ಲವೇ? ಸೆರಿ, ಇನ್ನೇನು ಮಾಡುವುದು, ನನ್ನ ಹಣೆಯಲ್ಲಿ ಇವತ್ತು ಮೋಸಹೊಗಬೇಕು ಎಂದು ಬರೆದಿದೆ ಅಷ್ಟೆ. ನಾನೇ ಎಣಿಸಿ ತರಬೇಕಿತ್ತು. ಸುಮ್ಮನಾಗಿಬಿಡೋಣ ಎಂದು ನಿಶ್ಚಯ ಮಾಡಿದ್ದೆ. ನಾಳೆ ಯಾವತ್ತಾದ್ರು, ನೀನು ಮೋಸ ಹೋಗಿ ಅದನ್ನು ಪ್ರಶ್ನಿಸಲಿಲ್ಲ ಎಂದು ವಿಷಾದ ಉಂಟಾದರೆ? ಅಂಗಡಿಗೆ ಹೋಗಿ ಒಂದು ಸಲ ಕೇಳಿಯೇ ಬಿಡೋಣ. ಅವಳು ಒಪ್ಪಿದರೆ ಸೆರಿ, ಇಲ್ಲದಿದ್ದರೆ ಅವಳಿಗೆ ಒಳ್ಳೆಯದನ್ನೇ ಹರಸಿ ಮರಲಿಬಿಡೋಣ ಎಂದು ಚಿಕ್ಕ ಗಾತ್ರದ ಪಟ್ಟೆಗಳನ್ನು ಒಂದು ಚೀಲದಲ್ಲಿ ಹಾಕಿ ಹೊರಟೇಬಿಟ್ಟೆ.

"ಏನಮ್ಮ, ನಾನು ಬೆಳಗ್ಗೆ ಬಂದು ೨೦೦ ಪಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದೆ. ಜ್ಞಾಪಕ ಇದಿಯಾ?"
"ಹು ಅಣ್ಣ."
"ನೀನು ಎಷ್ಟು ಕೊಟ್ಟೆ?""ಯಾಕಣ್ಣ, ಕಮ್ಮಿ ಇತ್ತಾ?"
ತಂದಿದ್ದ ಸಣ್ಣ ಗಾತ್ರದ ಪಟ್ಟೆಗಳನ್ನು ತೋರಿಸಿ, "ಈ ಸಿಜಿನದು ೭೫ ಕೊಟ್ಟಿದ್ದೀಯ. ನಾನು ಕೇಳಿದ ಗಾತ್ರದಲ್ಲಿ ೯೦ ಮನೇಲಿ ಇದೆ. ಹೀಗಾ ಮೋಸ ಮಾಡೋದು ನೀನು?"
"ಇಲ್ಲ ಅಣ್ಣ. ಗೊತ್ತಾಗ್ಲಿಲ್ಲ. ಮೋಸ ಮಾಡಿಲ್ಲಣ್ಣ. ಇನ್ನು ಎಷ್ಟು ಕೊಡಬೇಕು ಅಂತ ಹೇಳಿ, ಕೊಡ್ತೀನಿ."

"ಈ ಪಟ್ಟೆಗಳನ್ನು. ನೀನೆ ಇಟ್ಕೋ. ನನಗೆ ದೊಡ್ಡ ಪಟ್ಟೆಗಳೇ ಬೇಕು. ಇದು ನನಗೆ ಉಪಯೋಗ ಆಗೋಲ್ಲ. ಮನೇಲಿ ೯೦ ಇದೆ. ಇನ್ನು ೧೧೦ ಕೊಡಬೇಕು."

"ಆಯ್ತು ಅಣ್ಣ. ಪಕ್ಕದ ಅಂಗಡಿಯಿಂದ ತೊಗೊಂದ್ಬರ್ತೀನಿ. ನನ್ನ ಹತ್ರ ದೊಡ್ದಿಲ್ಲ."
"ಅದನ್ನ ಬೆಳಗ್ಗೆಯೇ ಹೇಳಬಹುದಿತ್ತಲ್ವಾ. ನಾನೇ ಪಕ್ಕದ ಅಂಗಡಿಯಿಂದ ತೊಗೊತಿದ್ದೆ."
"ಇದು ಚಿಕ್ಕದು ಅಂತ ಗೊತ್ತಾಗ್ಲಿಲ್ಲ ಅಣ್ಣ."
"ಸೆರಿ. ತೊಗೊಂಡ್ಬಾ. ಇನ್ನು ನೂರು ಕೊಡು ಸಾಕು. ೧೦ ಕಡಿಮೆ ಆದರೂ ಪರವಾಗಿಲ್ಲ."

ಪಕ್ಕದ ಅಂಗಡಿಯಿಂದ ತೊಗೊದ್ಬಂದು, "ನೀವೇ ಎಣ್ಸಿ ಅಣ್ಣ. ನನಗೆ ಅಷ್ಟೊಂದು ಎಣ್ಸಕ್ಕೆ ಬರೋಲ್ಲ."ನಾನೇ ಎಣ್ಸಿ ೧೦೦ ಪಟ್ಟೆಗಳನ್ನ ಮನೆಗೆ ತೊಗೊಂದ್ಬಂದೆ.

ಆಗ ನನಗೆ ಅನಿಸಿತು, ಈ ಲೋಕದಲ್ಲಿ ನಂಬಿಕೆಗೆ ಇನ್ನು ಬೆಲೆ ಇದೆ ಎಂದು. ಎಷ್ಟು ಸಣ್ಣ ವಿಷಯ ಅಲ್ವ ಇದು. ಪಾಪ ಅವಳಿಗೆ ಎಣಿಸುವುದು ಬರೋಲ್ಲ. ನಿಜವಾಗಲೂ ಮೋಸ ಮಾಡ್ಬೇಕು ಅಂತ ಇದ್ದಿದ್ದರೆ, ನನ್ನನ್ನ ನಂಬುವ ಅವಶ್ಯಕತೆಯೇ ಇರಲಿಲ್ಲ. ಅನಾವಶ್ಯಕವಾಗಿ, ಅವಳ ಬಗ್ಗೆ ತಪ್ಪು ತಿಳಿದಿದ್ದೆ. ಹೋಗಿ ವಿಚಾರಿಸಿದ್ದು ಒಳ್ಳೆಯದೇ ಆಯಿತು. ಹೀಗೇ ಜೀವನದಲ್ಲಿ ಪರಸ್ಪರ ನಂಬಿಕೆಯಿಲ್ಲದೆ, ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿಸಿ, ದ್ವೇಷ, ಅಸೂಯೆಗಳಿಗೆ ಎಲೆ ಹಾಕುವೆವು, ಆಲ್ವಾ?

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೆರಳಿ
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ? ಮಂಕುತಿಮ್ಮಾ

ಶ್ರೀ ರಾಮ ಪಟ್ಟಾಭಿಷೇಕ ಸುಸೂತ್ರದಿಂದ ಮುಗಿಯುತ್ತಲೇ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಹರಡಿದೆ.
ಸರ್ವಂ ಶ್ರೀ ಕ್ರಿಶ್ಣಾರ್ಪಣಮಸ್ತು.

Monday, August 3, 2009

ಸಂಡಾಸಿನಲ್ಲೂ ಗೊಣಗಾಟ


ಇತ್ತೀಚಿಗೆ ನಮ್ಮ ವಿಜಯ ಕರ್ನಾಟಕದಲ್ಲಿ ಬರುವ "ಕಾಲ್ ವೈಟಿಂಗ್" ಲೇಖನ ಓದುತ್ತಿದ್ದರೆ, ಹಲವಾರು ವರುಷದ ಹಿಂದೆ ನನಗೆ ಅನಿಸಿದ ಭಾವನೆಗಳನ್ನು ಹೇಳಿದಂತಿದೆ. ಈ ಮೊಬೈಲ್ ಫೋನ್ ಎಂಬ ವಸ್ತು ಯಾಕಪ್ಪಾ ಕಂಡುಹಿಡಿದರು ಅಂತ ಕೇಳ್ತಿದ್ದೆ.

ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಮೊಬೈಲ್ ಫೋನ್ ಇರುತ್ತದೆ. ಅದು ಸೇರಿಯೂ ತಪ್ಪೋ ಎಂಬುದೇ ದೊಡ್ಡ ಚರ್ಚೆ. ಶಾಲೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದು ನಿರಾಕರಿಸಿದರೂ, ಹೊರಗೆ ಮಕ್ಕಳಲ್ಲಿ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಪಾಪ ಮಕ್ಕಳು ಅಷ್ಟು ಹಠ ಹಿಡಿದರೆ ತಂದೆ ತಾಯಂದಿರು ಏನು ತಾನೇ ಮಾಡಬಲ್ಲರು.

ನಾನು ಓದಬೇಕಾದರೆ, ನನಗೆ ಈ ಮೊಬೈಲ್ ಫೋನ್ ಎಂಬ ಮಾಯಾ ಯಂತ್ರ ಇದೆ ಎಂದೇ ತಿಳಿದಿರಲಿಲ್ಲ. ಗೊತ್ತಿದ್ದರೆ ನಾನು ಹಠ ಹಿಡಿದು ದಕ್ಕಿಸಿಕೊಳ್ಳುತ್ತಿದ್ದೇನೋ ಏನೋ. ಬರಿ ಬಿಸಿನೆಸ್ ಮಾನ್ಗಳು ಉಪಯೋಗಿಸುವ ವಸ್ತು ಎಂದೇ ನಂಬಿದ್ದೆ. ಶಾಲೆ ಮುಗಿದು ಕಾಲೇಜ್ ಮೆಟ್ಟಲು ಹತ್ತಿದಾಗಲೂ ಇದು ನನಗೆ ತಿಳಿಯಲಿಲ್ಲ. ಅಷ್ಟು ಪೆದ್ದನಾಗಿದ್ದೆ ನಾನು. ಇಂಜಿನಿಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿದಾಗಲೂ ಈ ವಿಷಯ ನನಗೆ ಅರಿವಾಗಲಿಲ್ಲ. ಕೆಲ್ಸಕ್ಕೆ ಸೇರಿ ೬ ವರುಷ ತುಂಬಿದರೂ ನನ್ನ ಹತ್ತಿರ ಈ ಮಾಯಾ ಯಂತ್ರ ಇಲ್ಲದಿದ್ದು ನೋಡಿ ಹಾಸ್ಯ ಮಾಡಿದ್ದು ಅದೆಷ್ಟು ಜನ? ಆದರೂ ನಾನು ಬಗ್ಗಲಿಲ್ಲ. ಜನರು ಇದರ ಜೊತೆ ಸರಸವಾಡುತ್ತಿದ್ದ ರೀತಿ ನೋಡಿ ನನಗೆ ಇದನ್ನು ಕೊಳ್ಳಲೇಬಾರದೆಂದು ತೀರ್ಮಾನಿಸಿದ್ದೆ. ಎಲ್ಲಿ ಹೋದರೂ ಬಿಡದ ಈ ವಸ್ತು, ಟಾಯಿಲೆಟ್ಗೆ ಹೋದರೂ ಬಿಡುವುದಿಲ್ಲ. ಕಮೋಡ್ ಮೇಲೇ ಕೂತು ಘಂಟಘಟ್ಟಲೆ ಹರಟೆ ಹೊಡೆಯುತ್ತಾರೆ. ಯಾಕಪ್ಪಾ ಬೇಕು ಈ ಪಝೀತಿ ಅಂತಿದ್ದೆ.

ಕೊನೆಗೆ ಒಂದು ವರುಷದ ಕೆಳಗೆ ಯಾವುದೂ ಕೆಲಸದ ವಿಚಾರವಾಗಿ ಒಂದು ಮೊಬೈಲ್ ಫೋನು ಕೊಳ್ಳಬೇಕಾಯಿತು. ಈಗ ಆ ಕೆಲಸ ಮುಗಿದಿದೆ ಆದರೆ ಮೊಬೈಲ್ ಫೋನು ಇನ್ನು ತೊಲಗಿಲ್ಲ. ಸಮಯಕ್ಕೆ ಉಪಯೋಗ ಬಂದರೂ, ಇದೊಂತರಾ ಬಿಸಿ ತುಪ್ಪ ಇದ್ದಹಾಗೆ.

ಬಹಳ ಹಿಂದೆ ನನ್ನ ಆತ್ಮೀಯರಾದ ನರಸಿಂಹ ಮೂರ್ತಿಯವರು, ಮೊಬೈಲ್ ಫೋನ್ ಕುರಿತು ಬರೆದ ಒಂದು ಪದ್ಯ ಹೀಗಿದೆ.

ಒಳಕರೆಯ ಕೆರೆತ, ಕೆರೆದರೆ ನೆವೆ ಹೆಚ್ಚು
ಮಾತಿನ ಅಕ್ಕಿಯ ಮೇಲಿನ ಆಸೆ
ಮುದ್ದುಮಣಿಯ ಮುದ್ದಾಡಲು ಕಳ್ಳರ ಕಾಟ
ನಲ್ಲೆಯ ಇಂಚರ ಎದೆಯ ಡಮರು ನಾದ
ಅಧಿಕಾರಿಯ ಕರೆ ಅಡಕತ್ತರಿಯ ಅಡಿಕೆ
ಸಂಡಾಸಿನಲ್ಲೂ ಗೊಣಗಾಟ.

ನೀವೇ ಹೇಳಿ. ಇದು ಬೇಕೆ?