Wednesday, October 28, 2009

೫೦೦ರ ಸಂಭ್ರಮ


ಇತ್ತೀಚಿನ ಪ್ರವಾಹದಿಂದ ಉತ್ತರ ಕರ್ನಾಟಕ ಇನ್ನೂ ಸುಧಾರಿಕೊಳ್ಳುತ್ತಿದೆ. ಇನ್ನೆಷ್ಟು ವರುಷಗಳು ಬೇಕೋ ಮೊದಲಿನಂತಾಗಲು! ಹಪಿಯ ಧ್ವಂಸ ನೋಡಿದಾಗ ನೆನಪಾಗುವುದು, ವಿಜಯನಗರದ ಸಾಮ್ರಾಜ್ಯ. ೩೦೦ಕ್ಕೂ ಹೆಚ್ಚು ವರುಷಗಳ ಕಾಲ ಮುಸಲ್ಮಾನ ದಾಳಿಕೋರರ ಆಕ್ರಮಣದಿಂದ ದಕ್ಷಿಣ ಭಾರತವನ್ನು ರಕ್ಷಿಸಿದ ನಮ್ಮ ವಿಜಯನಗರ ಸಾಮ್ರಾಜ್ಯ, ಇತಿಹಾಸದಲ್ಲಿ ಒಂದು ಮಾದರಿಯ ಸಾಮ್ರಾಜ್ಯ ಎಂದೆನಿಸಿಕೊಂಡಿತು. ನಂತರ ಬಂದ ಶಿವಾಜಿ, ವಿಜಯನಗರದ ನಕಾಶೆಯನ್ನು ಪರಿಶೀಲಿಸಿ, ಅದೇ ರೀತಿಯ ಹೈಂದವಿ ಸಾಮ್ರಾಜ್ಯವನ್ನು ಕಟ್ಟಬೇಕೆಂದು ಸತತವಾಗಿ ಪ್ರಯತ್ನಿಸಿದ. ಇಂತಹ ಮೆಚ್ಚುಗೆಯನ್ನು ಪಡೆದ ಕ್ಷೇತ್ರ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.

ರಮರಾಯನನ್ನು ಮೋಸದಿಂದ ಸೋಲಿಸಿ, ವಿಜಯನಗರವನ್ನು ತನ್ನ ಕೈವಷಕ್ಕೆ ತೆಗೆದುಕೊಂಡ ಸುಲ್ತಾನರು, ೫ ತಿಂಗಳು ಸತತವಾಗಿ ಲೋಟಿಮಾಡಿ, ದೇವಾಲಯಗಳನ್ನು ಕೆಡವಿದರೂ, ಉಳಿದು ನಿಂತ ಅವಶೇಷಗಳು ಕೂಡ, ವಿಜಯನಗರದ ವೈಭವವನ್ನು ಕೂಗಿ ಹೇಳುತ್ತಿದೆ. ವಿಜಯನಗರದ ಸಿರಿವಂತಿಕೆ ಎಂದ ಕೋಡಲೇ ನಮ್ಮ ತಲೆಗೆ ತೋರುವುದು ಕೃಷ್ಣದೇವರಾಯ. ಕೃಷ್ಣದೇವರಾಯ ವಿಜಯನಗರದ ಪಟ್ಟಕ್ಕೆ ಏರಿದ್ದು ೧೫೦೯ ನಲ್ಲಿ. ಅಂದರೆ ಸೆರಿಯಾಗಿ ೫೦೦ ವರುಷಗಳ ಹಿಂದೆ. ಇದು ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭರತಕ್ಕೆ, ಭಾರತೀಯರಿಗೆ ಸಂಭ್ರಮದ ನೆನಪು.

ತಾನು ಪಟ್ಟಭಿಷಿಕ್ತನಾದ ಒಡನೆ ಕೃಷ್ಣದೇವರಾಯ ತನ್ನ ರಾಜ್ಯವನ್ನು ಬಲಪಡಿಸುವ ಕೆಲಸಕ್ಕೆ ತೊಡಗಿದ. ನೆರೆಹೊರೆಯ ರಾಜ್ಯಗಳು ತನ್ನ ರಾಜ್ಯದತ್ತ ಕಣ್ಣೆತ್ತಿಯೂ ನೋಡದಂತ ಸನ್ನಿವೇಶವನ್ನು ನಿರ್ಮಿಸಿದ್ದ. ಒರಿಸ್ಸಾದ ಕಳಿಂಗ ರಾಜ್ಯವನ್ನೂ ಗೆದ್ದು, ಹಂಪಿಯಿಂದ ಸಾವಿರಾರು ಮೈಲು ದೂರದಲ್ಲೂ ಲಕ್ಷಗಟ್ಟಲೆ ಸೈನಿಕರನ್ನು, ಅವರಿಗೆ ಬೇಕಾಗುವ ಸಾಮಗ್ರಿಗಳು, ಹಣಕಾಸು, ಶಸ್ತ್ರಾಸ್ತ್ರ ಎಲ್ಲವನ್ನೂ ಯೋಜಿಸಿದ್ದ. ಭರತಖಂಡದ ಪ್ರತಿಯೊಬ್ಬ ರಾಜನೂ ಬೆಚ್ಚುಬೀಳುವಂತೆ ಮಾಡಿದ್ದ. ಇದು ತನ್ನ ಮೊದಲ ನಾಲ್ಕೈದು ವರುಷಗಳ ಆಡಳಿತದಲ್ಲಿ ಮಾಡಿದ ಕೆಲಸ. ನಂತರ ರಾಜ್ಯದೊಳಗಿನ ಅಭಿವೃದ್ಧಿಯತ್ತ ಗಮನ ಹರಿಸಿದ. ಇದನ್ನು ಭಾರತ ಸ್ವಾತಂತ್ರ್ಯ ಪಡೆದ ಮೊದಮೊದಲ ಕಾಲಕ್ಕೆ ಹೋಲಿಸಿದರೆ, ನಮ್ಮ ದೇಶದ ಈಗಿನ ಸ್ಥಿತಿಗೆ ಏನು ಕಾರಣ ಎಂದು ಸ್ಪಷ್ಟವಾಗಿ ಕಾಣುತ್ತದೆ.

ತುಂಗಭದ್ರೆಯಿಂದ ಕಾಳುವೆಗಳ ಮೂಲಕ ಎಲ್ಲೆಡೆ ನೀರು ಹರಿಯುವಂತೆ ಮಾಡಿದ. ಅಂದು ಆರಂಭಗೊಂಡ ಪರಿಪಾಠ ಇಂದಿಗೂ ಮುಂದುವರಿಯುತ್ತಿದೆ ಎಂದು ಕೇಳ್ಪಟ್ಟೆ. ತುಂಗಭದ್ರೆ ಸಾಗಿ ಕೃಷ್ಣೆಯನ್ನು ಸೇರುವಷ್ಟು ಉದ್ದಕ್ಕೂ ರೈತರು ಏರ್ಪಡಿಸಿರುವ ವ್ಯವಸ್ಥೆ ಕಣ್ಣಾರೆ ನೋಡಬಹುದು ಎಂದು ನೋಡಿದವರು ಹೇಳುತ್ತಾರೆ. ಕೃಷ್ಣದೇವರಾಯ ಕಾಲುವೆ, ಜಲಾಶಯಗಳನ್ನು ಮಾತ್ರವಲ್ಲ, ದೇವಾಲಯಗಳನ್ನು, ವಿಧ್ಯಾಸಂಸ್ಥೆಗಳನ್ನು, ಕಲ್ಯಾಣ ಮಂಟಪಗಳನ್ನು, ಮತ್ತಿತರ ಜನೋಪಯೋಗಿ ಸಂಸ್ಥೆಗಳನ್ನು ನಿರ್ಮಿಸಿದ. ಇದರ ಪರಿಣಾಮವೇ ಇಡೀ ರಾಜ್ಯ ಸುಭೀಕ್ಷೆಯಿಂದ ಇದ್ದು ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು.

ಕೃಷ್ಣದೇವರಾಯನ ನಂತರ ಬಂದ ವಿಜಯನಗರದ ಅರಸರು, ಇದೇ ರೀತಿ ಮುಂದುವರೆಸಿದ್ದರೆ, ಹಂಪಿ ದುಸ್ಥಿತಿಯನ್ನು ಕಾಣಬೇಕಾಗಿರುತ್ತಿರಲಿಲ್ಲವೋ ಏನೋ. ಇತಿಹಾಸದ ಪುಟಗಳಲ್ಲಿ ಇಷ್ಟೆಲ್ಲಾ ಇದ್ದರೂ, ನಮ್ಮ ಬುದ್ದಿಜೀವಿಗಳು ಕೇಳುವ ಪ್ರಶ್ನೆ "ಕೃಷ್ಣದೇವರಾಯ ಕನ್ನಡಕ್ಕೆ ಏನು ಮಾಡಿದ? ಅವನ ಪುಸ್ತಕಗಳು ತೆಲುಗಿನಲ್ಲಿದೆ ಅಲ್ಲವೇ?". ಕೆಲವರಿಗೆ ವಾದ ಮಾಡುವುದರಲ್ಲೇ ಹೆಚ್ಚುಗಾರಿಕೆ. ಆಂಧ್ರದ ರಮಾರಮಣನ ಆದ ಮಾತ್ರಕ್ಕೆ ಕನ್ನಡರಾಯ ಆಗಬಾರದು ಎಂದು ಅರ್ಥವೇ?

ಹಳೆಯ ನೆನಪು, ಈಗಿನ ಮಾತು, ದೃಷ್ಯಗಳು ನಮ್ಮ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ. ರಾಜಕಾರಿಣಿಗಳನ್ನ ದೂಷಿಸುವುದು ದಂಡ. ಬೆಳೆದ ಮರವನ್ನು ಬಗ್ಗಿಸುವುದು ಕಷ್ಟ. ಹೊಸದಾಗಿ ಬರುವ ಗಿಡಗಳನ್ನು ಸೆರಿಯಾಗಿ ನೋಡಿಕೊಳೋಣ.

Wednesday, October 14, 2009

ಮರಳಿ ಬಾ ಪುಣ್ಯಕೋಟಿ



ಬಹಳ ವರುಷಗಳಿಂದ ನನಗೊಂದು ಆಸೆ. ಮನೆಯಲ್ಲಿ ಒಂದು ಹಸು ಇರಬೇಕೆಂದು. ಆದರೆ ಈ ಬೆಂಗಳೂರಿನಲ್ಲಿ ಅದನ್ನು ಮೇಯಿಸಲು ಎಲ್ಲಿಗೆ ಕಳಿಸುವುದು? ಹಸು ಆರೋಗ್ಯದಿಂದ ಇರಬೇಕಾದರೆ ಅದು ದಿನಕ್ಕೆ ಐದಾರು ಗಂಟೆಗಳವರಿಗಾದರೂ ಓಡಾಡಿ ಮೇಯಬೇಕು. ಕೂತಲ್ಲೇ ಕೂತರೆ ಅದು ನಿಶ್ಪ್ರಯೋಜಕವಾಗುತ್ತದೆ. ನನ್ನ ಕನಸು ಕನಸಾಗಿಯೇ ಉಳಿಯಿತು.


ಹಸು ಮನೆಯಲ್ಲಿದ್ದರೆ ಮನೆಗೆ ಒಳ್ಳೆಯದು ಎಂಬ ಭಾವನೆ ಇದೆ. ಹಸುವಿನ ಪ್ರಯೋಜನ ಎಲ್ಲರಿಗೂ ತಿಳಿದ ವಿಷಯವೇ. ಪಾಕೆಟ್ ಹಾಲಿಗಿಂತ ಹಸುವಿನ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಪುಷ್ಟಿದಾಯಕ ಎಂದು ವಿಜ್ಙಾನವೇ ಹೇಳುತ್ತದೆ. ಅದರ ಮೂತ್ರ, ಸಗಣಿಯಿಂದ ನಿರೋಧಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಹಸುವೊಂದಿದ್ದರೆ ಎಚ್೧ಎನ್೧ ಗೆ ಹೆದರಬೇಕಾಗಿಲ್ಲ ಅಲ್ಲವೇ?
ಈಗ ಯಾಕಪ್ಪ ಇದರ ಬಗ್ಗೆ, ಅದೂ ಬೆಂಗಲೂರಿನಲ್ಲಿ ಅಂತ ಯೋಚನೆ ಮಾಡ್ತಿದಿರಾ? ಭಾರತೀಯ ಹಸುವಿನ ೧೦೦ಕ್ಕೂ ಹೆಚ್ಚು ತಳಿಗಳಲ್ಲಿ ಕೇವಲ ೩೩ ತಳಿಗಲು ಇನ್ನು ನಶಿಸದೇ ಉಳಿದುಕೊಂಡಿದೆ. ಇದರ ಬಗ್ಗೆ ನಾವು ಏನು ಮಾಡುತ್ತಿದ್ದೀವಿ?


ನಮ್ಮ ಇತಿಹಾಸದಲ್ಲಿ ನಾವು ನೋಡುತ್ತೇವೆ, ಹಸುಗಳು ಆಧಾರವಾಗಿದ್ದ ರಾಜ್ಯಗಳು ಬೆಳವಣಿಗೆಯ ಹಾದಿಯಲ್ಲಿ ಸಾಗಿತು. ಆದರೆ ಇತಿಹಾಸದಿಂದ ನಾವು ಯಾವ ಪಾಠವನ್ನೂ ಕಲಿಯುತ್ತಿಲ್ಲ. ನಮ್ಮ ಪ್ರಧಾನ ಉದ್ಯಮ ಕೃಶಿ ಎಂದು ಹೇಳಿಕೊಂಡರೂ, ನಾವು ಪಾಶ್ಚಾತ್ಯದ ಹಾದಿನನ್ನು ಅನುಸರಿಸುತ್ತಿದ್ದೇವೆ. ಹಳ್ಳಿಗಳಿಂದ ರೈತರು ತಮ್ಮ ಬೇಸಾಯವನ್ನು ಬಿಟ್ಟು ಪಟ್ಟಣದ ಕಡೆ ಮುಖ ಮಾಡಿದ್ದಾರೆ. ಅವರನ್ನು ದೂಶಿಸುವುದು ಉಚಿತವಲ್ಲ. ಪಟ್ಟಣಗಳಲ್ಲಿರುವವರು ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ರೈತರು ಮಾತ್ರ ಹಳ್ಳಿಗಳಲ್ಲೇ ಉಳಿಯಬೇಕು ಎಂದು ನಾವು ಯಾಕೆ ನಿರೀಕ್ಷಿಸಬೇಕು? ಆದರೆ ಹೀಗಯೇ ಮುಂದುವರೆದರೆ, ನಮ್ಮಲ್ಲಿ ಹಣವಿರಬಹುದೇನೋ ಆದರೆ ಉಣ್ಣಲು ಅನ್ನ ಇರುವುದಿಲ್ಲ. ಹೇಗೆ ಕಳೆದ ೨೦-೨೫ ವರುಷಗಳಿಂದ ಪಟ್ಟಣಗಳಲ್ಲಿ ಐಟಿ ಆಂದೋಲನವಾಯಿತೋ ಹಾಗೆ ಈಗ ಕೃಶಿ ಮತ್ತು ಗೋ ಆಂದೋಲನವಾಗಬೇಕು. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಗತಿ ಅದೋಗತಿ. ಗೋವನ್ನು ಕಾಪಾಡುವುದು ಎಲ್ಲರ ಕರ್ತವ್ಯವಲ್ಲವೇ? ಅದು ಬರಿ ರೈತರಿಗೆ ಸಂಬಂದಪಟ್ಟ ವಿಷಯವೇ?


ಸೆಪ್ಟಂಬರ್ ೩೦ನೇ ತಾರೀಕು ಕುರುಕ್ಷೇತ್ರದಲ್ಲಿ "ವಿಷ್ವ ಮಂಗಲ ಗೋ-ಗ್ರಾಮ ಯಾತ್ರೆ" ಪ್ರಾರಂಭವಾಯಿತು. ಯಾತ್ರೆ ೧೦೮ ದಿನ ನಡೆಯಲಿದ್ದು, ಭಾರತದ ಎಲ್ಲಾ ರಾಜ್ಯಗಳಿಂದಲೂ ಸಾಗಿ ನಾಗಪುರದಲ್ಲಿ ಅಂತ್ಯಗೊಳ್ಳಲಿದೆ. ಬೆಂಗಲೂರಿಗೆ ಡಿಸೆಂಬರ್ ೧ನೇ ತಾರೀಕು ಬರುತ್ತದೆ. ಭಾರತದ ಪ್ರತಿಷ್ಠಿತ ಸ್ವಾಮಿ-ಸಂತರು ಸೇರಿ ಮಾಡುತ್ತಿರುವ ಈ ಕಾರ್ಯಕ್ರಮ, ಹೆಚ್ಚು ಜನರನ್ನು ಗೋ ಸಂರಕ್ಷಣೆಯ ಬಗ್ಗೆ ಜಾಗೃತಗೊಳಿಸಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ http://kan.gougram.org/ ಗೆ ಭೇಟಿನೀಡಿ.


ಇದರಲ್ಲಿ ನಮ್ಮ ಪಾತ್ರವೂ ಇದೆ. ಈ ಯಾತ್ರೆಯ ಫಲ ಹೆಚ್ಚು ಜನರಿಗೆ ಮುಟ್ಟಬೇಕಾಗಿದೆ. ಹೆಚ್ಚೆಚ್ಚು ಜನರು, ರೈತರು, ಕೈಗಾರಿಕೋದ್ಯಮರು, ರಾಜಕಾರಿಣಿಗಳು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು. ನಮ್ಮ ಸಾಂಸ್ಕೃತಿಕ ಬೆಳವಣಿಗೆಗೆ ಈಗಲೇ ಅಡಿಗಟ್ಟು ಹಾಕಬೇಕಿದೆ. ನೀವೂ ಇದಕ್ಕೆ ಕೈ ಜೋಡಿಸ್ತೀರ ಅಲ್ವಾ?