Thursday, January 28, 2010

ಯಾಮಿನಿ - ೨೦೧೦ (ಭಾಗ -೧)


ಈ ಸಲ ಚೆಳಿ ಸ್ವಲ್ಪ ಹೆಚ್ಚು ಅನ್ಸತ್ತೆ. ಆಫೀಸಿಂದ ಬೈಕ್ನಲ್ಲಿ ಬರೋವಾಗ ಮನೆ ತಲುಪಿದರೆ ಸಾಕು ಅನ್ನುವಷ್ಟು ಮೈ ಕೊರಿತಿರತ್ತೆ. ಸಂಜೆ ೭:೦೦ ಗಂಟೆಗೇ ಈ ಪರಿಸ್ಥಿತಿ ಆದ್ರೆ, ಇನ್ನು ರಾತ್ರಿ ಹೊತ್ತಿನಲ್ಲಿ ಇನ್ಹೇಗಿರತ್ತೋ ನಾ ಕಾಣೆ. ರಾತ್ರಿ ಹೊತ್ತು ಹೊರಗೆ ಇದ್ದು, ಈ ಮಂಜಿನ ಜೊತೆ ಸರಸ ಆಡ್ತಾ ಇರೋ ಮಜ ಅನುಭವಿಸಿದವರಿಗೇ ಗೊತ್ತು. ಈ ಅನುಭವವನ್ನು ಮೊನ್ನೆ ಪುನಃ ಪಡೆಯಲು ಅವಕಾಶ ಮಾಡಿಕೊಟ್ಟದ್ದು ಯಾಮಿನಿ - ೨೦೧೦. ಐಐಎಮ್-ಬಿ ವತಿಯಿಂದ ಪ್ರತಿ ವರುಷ ಯಾಮಿನಿ ಎಂಬ ಹೆಸರಿನಲ್ಲಿ ಒಂದು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ http://www.iimb-yamini.com/ ನೋಡಿ. ಯಾಮಿನಿಯ ವಿಷೇಶ ಅಂದ್ರೆ ಸಂಜೆ ೬:೩೦ಗೆ ಪ್ರಾರಂಭವಾಗುವ ಸಂಗೀತ ಕಾರ್ಯಕ್ರಮ, ಇಡೀ ರಾತ್ರಿ ಜಾರಿಯಲ್ಲಿದ್ದು, ಮರುದಿನ ಬೆಳಗ್ಗೆ ೬:೦೦ಗೆ ಮುಕ್ತಾಯವಾಗುತ್ತದೆ. ಈ ಸಲ ನನಗೆ ಈ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಒದಗಿ ಬಂದಿತು.

೨೫ನೇ ತಾರೀಕು ಸಂಜೆ ಹೊರಡಬೇಕು. ಮರುದಿನ ಗಣರಾಜ್ಯೋತ್ಸವವಿದ್ದರಿಂದ ಕಚೇರಿಗೆ ರಜ. ಕಚೇರಿಯಿಂದ ಬೇಗ ಮನೆಗೆ ಬಂದು ಹೊರಡಲು ಸಿದ್ದವಾದೆ. ಮುರಳಿ, ನವೀನ ನನ್ನ ಜೊತೆ ಕೈ ಜೋಡಿಸಿದರು. ಮೂರೂ ಜನ ಎರಡು ವಾಹನಗಳಲ್ಲಿ ಐಐಎಮ್-ಬಿ ಸೇರುವ ಹೊತ್ತಿಗೆ ಸುಮಾರು ೭:೦೦ ಗಂಟೆ ಆಗಿತ್ತು. ನಮ್ಮ ಪುಣ್ಯ, ಕಾರ್ಯಕ್ರಮ ಇನ್ನೂ ಪ್ರಾರಂಬವಾಗಿರಲಿಲ್ಲ. ವೇದಿಕೆಯ ಸಮೀಪದಲ್ಲಿ, ಮೆತ್ತಗಿನ ಹಾಸಿಗೆಗಳನ್ನು ಹಾಸಿದ್ದರು. ಸುಮಾರು ೫೦೦ ಜನ ಸುಲಲಿತವಾಗಿ ಕೂರಬಲ್ಲಷ್ಟು ಜಾಗದಲ್ಲಿ ಹಾಸಿಗೆಗಳನ್ನು ಹಾಸಿದ್ದರು. ಅದರ ಸುತ್ತಲೂ ಇನ್ನೂ ಸುಮಾರು ೫೦೦ ಜನ ಕೂರಬಹುದಾದಷ್ಟು ಕುರ್ಚಿಗಳನ್ನು ಹಾಕಿದ್ದರು. ಚೆಳಿಗೆ ಮೈ ಬಿಸಿಮಾಡಿಕೊಳ್ಳಲು, ಅಲ್ಲಲ್ಲಿ ಬೆಂಕಿಯನ್ನು (ಕಾಂಪ್ ಫೈರ್) ಹಾಕಿದ್ದರು. ಒಟ್ಟಿನಲ್ಲಿ "Holiday mood at its best" ಎಂದು ಅನಿಸಿತು.

ಕಾರ್ಯಕ್ರಮ ನಿತ್ಯಶ್ರೀ ಮಹದೇವನ್ರವರ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಿಂದ ಪ್ರಾರಂಭವಾಯಿತು. ಇವರ ಇತರ ಕಚೇರಿಗಳನ್ನು ಮುಂಚೆಯೇ ಕೇಳಿದ್ದರಿಂದ ಇವರ ಪ್ರತಿಭೆಯ ಅರಿವು ನನಗಿತ್ತು. ಅವರ ಆಲಾಪನ ಶೈಲಿ, ಸ್ವರಕಲ್ಪನೆಗಳ ವೈವಿಧ್ಯತೆಗಳಿಂದ ಜನರನ್ನು ಮೈಮರೆಸಿದರು. ಎರಡೂವರೆ ಗಂಟೆಗಳ ನಂತರ ತಿಲ್ಲಾನದಿಂದ ಅವರು ಮುಗಿಸಿದಾಗ, ಇನ್ನೂ ಸ್ವಲ್ಪ ಹೊತ್ತು ಹಾಡಬಾರದೆ ಎಂದನಿಸಿತು. ಚೆಳಿ, ಹಸಿವು ಯಾವುದೂ ಹತ್ತಿರ ಸುಳಿಯಲಿಲ್ಲ. ಅವರ ಕೆಲವು ಚಿತ್ರಗಳು (ದೂರದಿಂದ ತೆಗದಿದ್ದು) -












ನಿತ್ಯಶ್ರೀ ಅವರ ಗಾಯನ ಮುಗಿಯುವಷ್ಟರಲ್ಲಿ ಸುಮಾರು ೯:೩೦ ಆಗಿತ್ತು. ಅಷ್ಟು ಹೊತ್ತು ತಾಲ್ಮೆಯಿಂದ ಕೂತಿದ್ದ ಜನ, ತಕ್ಷಣ ಎದ್ದು ತಿಂಡಿಗಳ ಮಳಿಗೆಯ ದಿಕ್ಕಿನಲ್ಲಿ ಓಡಿದರು. ನಾವು ಸಮಾಧಾನವಾಗಿ ಎದ್ದು ಹೋಗುವಷ್ಟರಲ್ಲಿ, ಶ್ರೀ ಕೃಷ್ಣ ಭವನದ ಮಳಿಗೆಯಲ್ಲಿ ಜನಸಾಗರವೇ ಇತ್ತು. ಇನ್ನು ಆ ಸಾಲಲ್ಲೇ ಇದ್ದರೆ ಇವತ್ತು ಉಪವಾಸವೇ ಎಂದು, ಸಾಂಡ್ವಿಚ್ ಇಂದಲೇ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಹೊಟ್ಟೆ ಪೂರ್ತಿ ತುಂಬದಿದ್ದರೂ ಜೇಬಿಗೆ ಮಜಬೂತಾದ ಕತ್ತರಿಯೇ ಬಿದ್ದಿತು :-(

ನಂತರದ ಸರದಿ ಪ್ರಸಿದ್ದ ವೀಣಾವಾದಕಿ ಗಾಯತ್ರಿಯವರದ್ದು. ಚಿಕ್ಕ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿತಿದ್ದರೂ ನನಗೆ ರಾಗಗಳ ಜ್ಞಾನ ಕಡಿಮೆ. ರಾಗ, ತಾಳಗಳಿಗಿಂತ ಸಾಹಿತ್ಯದ ಭಾವ ಇಷ್ಟವಾಗುತ್ತದೆ. ಆದ್ದರಿಂದ ವಾದ್ಯಕ್ಕಿಂತ ಗಾಯನದಲ್ಲಿ ಹೆಚ್ಚು ಒಲವು. ಅಷ್ಟಾದರೂ ವೀಣಾವಾದ್ಯದ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟು ಆಕರ್ಶಕ ವೀಣೆ ನುಡಿತವನ್ನು ನಾನು ಎಂದೂ ಕಂಡಿರಲಿಲ್ಲ. ಅದರಲ್ಲೂನಾರಾಯಣ ಸೂಕ್ತ ಸಾಲುಗಳನ್ನು ಉದಾತ್ತ, ಅನುದಾತ್ತ, ಸ್ವರಿತಗಳ ಒಳಗೊಂಡು ವೀಣೆಯಮೂಲಕ ಪಾರಾಯಣ ಮಾಡಿದ್ದು ವಿಶೇಷ. ಬಂದಿದ್ದಕ್ಕೂ, ನಿದ್ದೆಗೆಟ್ಟು ಕೂತಿದ್ದಕ್ಕೂ ಸಾರ್ಥಕ. ವೀಣೇ ಗಾಯತ್ರಿಯವರ ಚಿತ್ರಗಳು -













ಗಾಯತ್ರಿಯವರ ವೀಣಾವಾದನ ಮುಗಿದಾಗ ಮಧ್ಯರಾತ್ರಿ ೧೨:೦೦ ದಾಟಿತ್ತು. ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಮಾಡಿಕೊಳ್ಳಲು ಸ್ವಲ್ಪ ಸಮಯ ವಿರಾಮ.

... (ಸಶೇಷ)

Monday, January 4, 2010

ಹತ್ತರ ಹೊತ್ತು



ಮತ್ತೊಂದು ಕಾಲ ಘಟ್ಟ ಸಾಗಿ ಹೋಯಿತು. ಇದು ನಮಗೆ ಹೊಸ ವರುಷವೇ? ಹಾಗಾದರೆ ಯುಗಾದಿ ಏನು? ಈ ಪ್ರಷ್ನೆಗಳು ಸಹಜವಾಗಿ ಉದ್ಭವಿಸುತ್ತದೆ. ಆದರೆ ನಾವು ಯಾವುದನ್ನೂ ತಿರಸ್ಕಾರ ಮನೋಭಾವದಿಂದ ನೋಡುವುದನ್ನು ಕಡಿಮೆಮಾಡಿದರೆ ಮನುಜನಕ್ಕೆ ಒಳ್ಳೆಯದು. ಗ್ರೆಗೋರಿಯನ್ ಕಾಲೆಂಡರ್ ಪ್ರಕಾರ ಇದು ಹೊಸ ವರುಷವೇ. ನಾವು ಈ ಹೊಸ ವರುಷದಂದು ಶುಭ ಹಾರೈಸಿದರೆ ನಮ್ಮತನವನ್ನು ಬಿಟ್ಟುಕೊಡುವುದೆಂದಲ್ಲ.


೨೦೦೯ ಕಳೆದು ೨೦೧೦ ಪ್ರಾರಂಭದ ಅವಧಿಯಲ್ಲಿ ನಾವು ನಡೆದುಕೊಂಡು ಬಂದ ದಾರಿಯಲ್ಲಿ ಕಣ್ಣು ಹಾಯಿಸಿದರೆ, ಅದರಿಂದ ಕಲಿಯುವುದು ಬಹಳಷ್ಟಿರಬಹುದು. ಕಳೆದ ಕಾಲೆಂಡರ್ ವರುಷ, ನಮಗೆ ಅಷ್ಟಾಗಿ ಸುಗಮವಾಗಿ ಸಾಗಲಿಲ್ಲ ಎಂದು ಬಹುಮತರ ಅಭಿಪ್ರಾಯ. ವಿರೋಧಿ ಸಂವತ್ಸರದ ಹೆಚ್ಚಿನ ಅವಧಿ ೨೦೦೯ ನಲ್ಲಿ ಕಳೆದು, ಪರಸ್ಪರ ವೈಮನಸ್ಯವೇ ಹೆಚ್ಚಾಗಿ ಬೆಳೆಯುತ್ತಿರುವ ಸೂಚನೆ ಕಾಣುತ್ತಿದೆ. ೨೦೧೨ ರ ಪ್ರಳಯಕ್ಕೆ ಇದೇ ತಳಪಾಯ ಹಾಕಿದಂತಿದೆ ;-)


ನನಗಂತೂ ೨೦೦೯ ಮರೆಯುವಂತಹ ವರುಷವೇ. ವೈಯುಕ್ತಿಕವಾಗಿ, ಸಾಮಾಜಿಕವಾಗಿ ಇಷ್ಟೋಂದು ಸಾವು ಕಂಡಿರಲಿಲ್ಲ. ಕೊನೆಗೆ ಎಲ್ಲವೂ ಇಷ್ಟೆ ಎಂಬ ನಿರ್ಲಿಪ್ತತೆಯ ಮನೋಭಾವ ಹರಿದುಬಂತು. ಅಶ್ವಥ್ ಮತ್ತು ವಿಷ್ನು ಅವರನ್ನು ಕಳೆದುಕೊಂಡ ನಾವೇ ದುರ್ಭಾಗ್ಯವಂತರು. ಮುಂಬರುವ ವರುಷ ನಮ್ಮ ಸ್ವಾರ್ಥ, ವೈಮನಸ್ಯವನ್ನು ಹೋಗಲಾಡಿಸಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಹೊಸ ವರುಷದ ಶುಭಾಷಯಗಳು.


೨೦೧೦ಯನ್ನು ಈ ಮನುಸ್ಮೃತಿಯ ಶ್ಲೋಕದಿಂದ ಪ್ರಾರಂಭಿಸುತ್ತಿದ್ದೇನೆ.


ಪರಿತ್ಯಜೇದರ್ಥಕಾಮೌ ಯೌ ಸ್ಯಾತಾಂ ಧರ್ಮವಿರ್ಜತೌ
ಧರ್ಮಚಾಪ್ಯಸುಖೋದರ್ಕ ಲೋಕನಿಕೃಷ್ಟಮೇವ ಚ


ಅರ್ಥ: ಧರ್ಮದಿಂದ ತಿರಸ್ಕೃತವಾದ ಧನವನ್ನು ಸ್ವೀಕಾರವಾಗದಿರಲಿ. ಧರ್ಮದಿಂದ ಭವಿಷ್ಯದಲ್ಲಿ ಮನುಜ ಜನಾಂಗಕ್ಕೆ/ಪ್ರಕೃತಿಗೆ ನೋವು ಉಂಟಾದರೆ, ಈ ಧರ್ಮವೇ ಸ್ವೀಕಾರವಾಗದಿರಲಿ.


ಇದು ಮನುಸ್ಮೃತಿಯಲ್ಲೇ ಹೇಳಿದೆ. ಹಾಗಾದರೆ, ಧರ್ಮ ಬದಲಾಗುತ್ತದೆಯೇ ಎಂಬ ಪ್ರಶ್ನೆ ಸಹಜ. ಇಲ್ಲಿ ’ಧರ್ಮ’ ಎಂದರೆ ಯುಗಧರ್ಮ ಎಂಬ ಅರ್ಥ. ಸನಾತನ ಧರ್ಮವಲ್ಲ. ಸನಾತನ ಧರ್ಮ ಬದಲಾಗುವುದಿಲ್ಲ. ಆದರೆ ಸಮಯಕ್ಕೆ ತಕ್ಕಹಾಗೆ ನಮ್ಮ ನಡವಳಿಕೆಗಳನ್ನು ಮಾರ್ಪಾಡಿಸಬೇಕೆಂಬುದಾಗಿ ಮನುವೇ ಹೇಳಿರುವಂತಿದೆ (ಮಾರ್ಪಾಡು ಸನಾತನಧರ್ಮದ ಚೌಕಟ್ಟಿನಲ್ಲಿ). ಇದರ ವಿಸ್ತಾರವಾದ ಅರ್ಥ ತಿಳಿದವರು ಹಂಚಿಕೊಳ್ಳಬಹುದು.

ಚಿತ್ರ: ಅಂತರ್ಜಾಲ