Monday, March 1, 2010

ಉಜ್ವಲ ಪ್ರಾರಂಭ


ಸಂಜೆಗೆ ಕಾತರದಿಂದ ಎದುರು ನೋಡುತ್ತಿದ್ದೆ. ವಾತಾವರಣ ಉದ್ರೇಕದಿಂದ ಕೂಡಿತ್ತು. ಕುತೂಹಲಕ್ಕೆ ಮಿತಿಯೇ ಇರಲಿಲ್ಲ. ಹಸಿವು, ನಿದ್ದೆ ಯಾವುದೂ ಹತ್ತಿರ ಸುಳಿಯುತ್ತಿರಲಿಲ್ಲ. ಇನ್ನು ಸ್ವಲ್ಪ ಹೊತ್ತಿನಲ್ಲೇ ಪರಿಣಾಮ ತಿಳಿಯುವುದು. ಮಾಡುವುದಕ್ಕೆ ಕೆಲಸಗಳು ಬಹಳಷ್ಟಿದೆ. ಆದರೆ ಮನಸ್ಸು ಇದರಲ್ಲೇ ಮುಳುಗಿಬಿಟ್ಟಿದೆ. ಸಮಯ ರಾತ್ರಿ ೮:೩೦. ಆತಂಕದಿಂದ ಹೃದಯ ಸ್ವಲ್ಪ ವೇಗವಾಗೇ ಬಡಿದುಕೊಳ್ಳುತ್ತಿತ್ತು. ಇನ್ನೇನು ಯುದ್ಧ ಪ್ರಾರಂಭ. ಭಾರತ ಮತ್ತು ಪಾಕಿಸ್ತಾನದ ಸೈನಿಕರು ಯುದ್ಧದ ಮೈದಾನಕ್ಕೆ ಇಳಿದಾಯಿತು. ಇಷ್ಟೊತ್ತಿಗೆ ನೀವು ಊಹಿಸುರುತ್ತೀರ. ಭಾರತ ಮತ್ತು ಪಾಕಿಸ್ತಾನದ ನಡುವೆ ಆಟ. ಆದರೆ ಇದು ಕ್ರಿಕೆಟ್ ಅಲ್ಲ, ಹಾಕಿ ಪಂದ್ಯ. ವಿಷ್ವ ಹಾಕಿ ಪಂದ್ಯದ ಮೊದಲನೇ ಶ್ರೇಣಿಯ ಆಟ. ಭಾರತ ಪಾಕಿಸ್ತಾನವನ್ನು ೪-೧ ಗೋಲುಗಳ ಅಂತರದಲ್ಲಿ ಸೋಲಿಸಿತು.

ಕ್ರೀಡಾರಂಗ ತುಂಬಿ ತುಳುಕುತ್ತಿತ್ತು. ಒಂದು ಹಾಕಿ ಪಂದ್ಯವನ್ನು ನಮ್ಮ ಜನರು ಇಷ್ಟರ ಮಟ್ಟಿಗೆ ಅನುಸರಿಸುತ್ತಿದ್ದುದನ್ನು ನೋಡಿ ಸಂತಸವಾಯಿತು. ಭಾರತದಲ್ಲೇ ಹುಟ್ಟಿ ಬೆಳೆದುಬಂದ ಪಂದ್ಯವಲ್ಲದಿದ್ದರೂ, ಹಾಕಿ ನಮ್ಮ ರಾಷ್ಟ್ರೀಯ ಸ್ಪರ್ಧೆ ಎಂದು ಗುರುತಿಸಲ್ಪಟ್ಟಿದೆ. ಅದಕ್ಕೆ ಸಲ್ಲಬೇಕಾದ ಸ್ತಾನವನ್ನು ಮತ್ತೆ ಪಡೆದುಕೊಳ್ಳುತಿದೆ ಎಂಬ ಆಶಯ ಮೂಡುತ್ತಿದೆ. ಅದಕ್ಕೆ ಪ್ರತ್ಯುತ್ತರವಾಗಿ ನನ್ನೆ ಭಾರತದ ತಂಡ ತನ್ನ ಅತ್ಯುತ್ತಮ ಪ್ರದರ್ಶನದಿಂದ ನಮ್ಮನ್ನೆಲ್ಲಾ ಮೈಮರೆಸಿತು ಎಂದು ಹೇಳಿದರೆ, ಅದು ಉತ್ಪ್ರೇಕ್ಷೆಯಾಗುವುದಿಲ್ಲವೇನೋ. ಈ ಪಂದ್ಯದಲ್ಲಿ ನಮ್ಮ ಆಟಗಾರರು ತೋರಿಸಿದ ಉತ್ಸಾಹ, ದಿಟ್ಟತನ, ಪಂದ್ಯಾಟದ ಕೊನೆಯವರೆಗೂ, ಅದರ ನಂತರವೂ ಹೀಗೇ ಇರಲಿ.

ಪಾಕಿಸ್ತಾನ ನಮ್ಮ ಒಳ್ಳೆಯ ಸಹೃದಯದ ನರೆಯವ ಎಂದು ಶಾರುಕ್ ಖಾನ್ ಸಾಹೇಬರು ಬೊಬ್ಬೆ ಹೊಡದರೂ, ಜನರ ಮನಸ್ಸಿನಲ್ಲಿ ಪಾಕಿಸ್ತಾನಕ್ಕೆ ಯಾವ ಸ್ಥಾನ ಇದೆ ಎಂಬುದು ಎಲ್ಲರಿಗೂ ತಿಳಿದಂತಹ ಮಾತು. ಕ್ರೀಡೆಯನ್ನು ಸೇರಿಸಿ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿ, ನಾವು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ. ಅದಕ್ಕೆ ಈ ಪಂದ್ಯವೂ ಒಂದು ಭಾಗಿ. ಹೀಗೆ ಮುಂದೆ ಬರುವೆ ಪಂದ್ಯಗಳಲ್ಲೂ ಗೆಲುವನ್ನು ಸಾಧಿಸಿ, ವಿಷ್ವ ಪಂದ್ಯಾಟವನ್ನು ಮತ್ತೊಮ್ಮೆ ಗೆಲ್ಲುವಂತವರಾಗಲಿ. ಚಕ್ ದೆ ಇಂಡಿಯ.

ಚಿತ್ರ: ಅಂತರ್ಜಾಲ

Monday, February 1, 2010

ಯಾಮಿನಿ - ೨೦೧೦ (ಭಾಗ -೨)

ಗಾಯತ್ರಿಯವರ ವೀಣಾವಾದನ ಮುಗಿದಾಗ ಮಧ್ಯರಾತ್ರಿ ೧೨:೦೦ ದಾಟಿತ್ತು. ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಮಾಡಿಕೊಳ್ಳಲು ಸ್ವಲ್ಪ ಸಮಯ ವಿರಾಮ. ಮುಂದಿನ ಕಾರ್ಯಕ್ರಮ ಶ್ರೀಮತಿ ಶಾಂಭವಿ ವಾಝೆ ಅವರ ಕಥಕ್ ನೃತ್ಯವಾದ್ದರಿಂದ ವೇದಿಕೆ ಸಿದ್ದಪಡಿಸಲು ಸ್ವಲ್ಪ ಸಮಯ ಬೇಕಾಗಿತ್ತು. ಚಂದ್ರನೂ ನೆತ್ತಿಯ ಎತ್ತರಕ್ಕೆ ಬಂದಿದ್ದ. ನವೀನ ಆಗಲೇ ಸ್ವಪ್ನ ಲೋಕದಲ್ಲಿ ತೇಲಾಡುತ್ತಿದ್ದ. ಬೆಂಕಿಯ ಹೊಗೆ ಸ್ವಲ್ಪ ಹೆಚ್ಚೇ ಹರಡುತ್ತಿತ್ತು. ಆಗ ನನ್ನ ಕಾಮೆರಾ ಕಣ್ಣುಗಳು ಕಂಡದ್ದು ಎವು -


ನಾನೂ ಸ್ವಲ್ಪ ಹೊತ್ತು ಮಲಗಬೇಕೋ ಬೇಡವೋ ಎಂದು ಯೋಚಿಸುತ್ತಿರಬೇಕಾದರೆ ಮುರಳಿಯ ಗುರುಗಳು ಆಗಮಿಸಿದರು. ಅವರ ಜೊತೆ ಹರಟುತ್ತಿದ್ದಾಗ ನಿದ್ದೆಯು ಬಂದ ಹಾದಿಯನ್ನೇ ಹಿಡಿದು ಮರಳಿತು. ಒಂದು ಕಪ್ ಕಾಫೀ ಹೀರಿ, ಮತ್ತೆ ಸ್ವಸ್ಥಾನಕ್ಕೆ ಬಂದು ಕೂತೆ. ಅರ್ಧಕ್ಕರ್ಧ ಜನ ಎದ್ದು ಹೋಗಿದ್ದರು.

ನಾನು ಆಗಿನವರೆಗೂ ಯಾವುದೇ ಕಥಕ್ ನೃತ್ಯ ನೇರವಾಗಿ ನೋಡಿರಲಿಲ್ಲ. ಯಾಕೋ ಭರತನಾಟ್ಯಮ್‍ಗೆ ಇದ್ದ ಆಸಕ್ತಿ ಕಥಕ್ ನೃತ್ಯಕ್ಕೆ ಇರಲಿಲ್ಲ. ಆದರೂ ಬಂದ ಉದ್ದೇಶ ವ್ಯರ್ಥವಾಗಬಾರದೆಂದು ಕೂತು ನೋಡುತ್ತಿದ್ದೆ. ನೃತ್ಯ ಕಾರ್ಯಕ್ರಮ ಪ್ರಾರಂಭದಲ್ಲಿ ಕಲಾವಿದರ ಪರಿಚಯವಾಯಿತು. ಶಾಂಭವಿ ವಾಝೆಯವರು ಮೂಲತಃ ಪುಣೆಯವರಾಗಿದ್ದು, ಕಥಕ್‍ನಲ್ಲಿ ಪರಿಣಿತರಾಗಿ, ದೇಶ-ವಿದೇಶಗಳಲ್ಲಿ ಹಲವಾರು ನೃತ್ಯಕಾರ್ಯಕ್ರಮವನ್ನು ನೀಡಿದ್ದರು. ಅಷ್ಟಲ್ಲದೆ ಫ್ರೆಂಚ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ನಿಪುಣತೆ ಪಡೆದಿದ್ದರು. ಅವರ ಪರಿಚಯ ಕೇಳಿ ಕಿವಿ ಚುರುಕಾಯಿತು. ಅವರ ನೃತ್ಯ ಕಾರ್ಯಕ್ರಮ ನೋಡಲು ಆಸಕ್ತಿ ಹೆಚ್ಚಾಯಿತು.

ನೃತ್ಯವು ಗಣೇಶನ ಆರಾಧನೆಯಿಂದ ಪ್ರಾರಂಭವಾಯಿತು. ನಂತರ ಹಲವಾರು ತಾಳ ವಿನ್ಯಾಸಗಳು (ಇದಕ್ಕೆ ಕಥಕ್‍ನಲ್ಲಿ ಏನೆಂದು ಹೇಳುತ್ತರೆ ಎಂಬುದು ಗೊತ್ತಿಲ್ಲ) ಮತ್ತು ಅದರ ಅನುಗುಣವಾಗಿ ಪಾದಮೆಟ್ಟಲುಗಳೊಳಗೊಂಡ ನೃತ್ಯ. ಇದರ ವೈಶಿಷ್ಟ್ಯ ಅಂದರೆ, ಶಾಮ್ಭವಿ ವಾಝೆ ಅವರೇ ತಾಳ ಮಾದರಿಯನ್ನು ನಿರೂಪಿಸಿ, ನಂತರ ಅವರೇ ನೃತ್ಯವನ್ನು ಮಾಡುತ್ತಿದ್ದರು (ನೃತ್ಯಮಾಡುವಾಗ ನಿರೂಪಣೆಯ ಕೆಲಸ ಸಿ.ಡಿ. ಪ್ಲೇಯರ್ ಮಾಡುತ್ತಿತ್ತು). ನಂತರದ ನಾಟ್ಯ ವಸ್ತು/ವಿಷಯಕ್ಕೆ ಅನುಗುಣವಾದುದರಿಂದ ನನ್ನಂತಹ ಪಾಮರರಿಗೂ ಅರ್ಥವಾಯಿತು. ಯಶೋದೆ ಕೃಷ್ಣನನ್ನು ಮಲಗಿಸುವ ಪರಿ, ಕೃಷ್ಣ ಗೋವರ್ಧನ ಗಿರಿಯನ್ನು ಎತ್ತುವ ಪ್ರಸಂಗ, ಕೃಷ್ಣ ಗೋಪಿಯರ ಜೊತೆ ಹೋಲಿ ಆಡುತ್ತಿರುವ ಕ್ರಮ, ಎಲ್ಲದರ ಒಂದೊಂದು ಚಿತ್ರವೂ ಕಣ್ಣಮುಂದೆ ಹರಿದು ಹೋಯಿತು. ಕಥಕ್ ಇಷ್ಟು ಆಕರ್ಷಕವಾಗಬಹುದು ಎಂದು ತಿಳಿದದ್ದೇ ಆಗ. ವೃಂದನಾಟ್ಯದಲ್ಲಿ ಏಕಕಾಲಿಕ ಚಲನೆಗಳನ್ನು ನೋಡಿದಾಗ, ಹೇಗೆ ಅಭ್ಯಸ ಮಾಡುತ್ತಿದ್ದರೆಂದೇ ತಿಳಿಯಲಿಲ್ಲ. ನೃತ್ಯದ ಕೆಲವೊಂದು ಚಿತ್ರಗಳು -ನೃತ್ಯ ಮುಗಿಯುವಾಗ ಸುಮಾರು ೩:೦೦ ಗಂತೆ ಆಗಿತ್ತೇನೋ. ನಂತರ ಹಿಂದೂಸ್ತಾನಿ ಗಾಯನ ತಕ್ಷಣವೇ ಪ್ರಾರಂಭವಾಯಿತು, ಆನಂದ್ ಭಾಟೆಯವರ ನೇತೃತ್ವದಲ್ಲಿ. ಅವರ ಪರಿಚಯವಾದಾಗ, ಅವರು ಒಬ್ಬ ಸಾಫ್ಟ್ವೇರ್ ಇಂಜಿನೀರ್ ಎಂದು ತಿಳಿದು ಸಂತೋಷವೂ ಆಶ್ಚರ್ಯವೂ ಆಯಿತು. ಮೊದಲ ಗಾನದ ಆಲಾಪನೆ ಮುಗಿಯುವಷ್ಟರಲ್ಲೇ ನನಗೇ ತಿಳಿಯದೇ ಮಲಗಿಬಿಟ್ಟಿದ್ದೆ ;-) ಯಾಕೋ ಹಿಂದುಸ್ತಾನಿ ಸಂಗೀತಕ್ಕೂ ನನಗೂ ನಂಟು ಅಷ್ಟೇ ಅನ್ಸತ್ತೆ. ಸುಮಾರು ೫:೦೦ ಗಂಟೆಗೆ ಮುರಳಿ ಎಬ್ಬಿಸಿದ. ಆಗ ನನಗೆ ಕೇಳಿಸುತ್ತುದ್ದುದು ’ಭಾಗ್ಯಾದ ಲಕ್ಷ್ಮಿ ಬಾರಮ್ಮಾ’ ಹಾಡು, ’ನೋಡಿ ಸ್ವಾಮಿ ನಾವಿರೋದು ಹೀಗೆ’ ಚಿತ್ರದಲ್ಲಿ ಭೇಮ್ಸೇನ್ ಜೋಶಿ ಹಾಡಿದ್ರಲ್ಲಾ, ಆ ಶೈಲಿಯಲ್ಲಿ.ಮುಂಜಾವಿನ ಮಂಜಿನ ಪರಿಸರದಲ್ಲಿ ಕೂತು ಸಂಗೀತ ಕೇಳುವುದೂ ಒಂತರಾ ಮಧುರ ಯಾತನೆ. ಸಂಗೀತ ಮುಗಿದಮೇಲೆ ದ್ವಿಚಕ್ರವಾಹನದಲ್ಲಿ ೨೦ ಕಿಮಿ ಸಂಚರಿಸುವುದು ಬರೀ ಮರೆಯುವಂತಹ ಯಾತನೆ.
ಚಿತ್ರಗಳನ್ನು ತೆಗೆದಿದ್ದು ಸೋನಿ ಎಚ್-೫೦ ಕಾಮೆರಾದಿಂದ.
ತೆಗೆದವರು ನವೀನ, ಮುರಳಿ ಮತ್ತು ನಾನು. ಯಾವುದು ಯಾರು ತೆಗೆದದ್ದು ಎಂಬುದು ಜ್ಞಾಪಕವಿಲ್ಲ.

(ಮುಗಿಯಿತು)

Thursday, January 28, 2010

ಯಾಮಿನಿ - ೨೦೧೦ (ಭಾಗ -೧)


ಈ ಸಲ ಚೆಳಿ ಸ್ವಲ್ಪ ಹೆಚ್ಚು ಅನ್ಸತ್ತೆ. ಆಫೀಸಿಂದ ಬೈಕ್ನಲ್ಲಿ ಬರೋವಾಗ ಮನೆ ತಲುಪಿದರೆ ಸಾಕು ಅನ್ನುವಷ್ಟು ಮೈ ಕೊರಿತಿರತ್ತೆ. ಸಂಜೆ ೭:೦೦ ಗಂಟೆಗೇ ಈ ಪರಿಸ್ಥಿತಿ ಆದ್ರೆ, ಇನ್ನು ರಾತ್ರಿ ಹೊತ್ತಿನಲ್ಲಿ ಇನ್ಹೇಗಿರತ್ತೋ ನಾ ಕಾಣೆ. ರಾತ್ರಿ ಹೊತ್ತು ಹೊರಗೆ ಇದ್ದು, ಈ ಮಂಜಿನ ಜೊತೆ ಸರಸ ಆಡ್ತಾ ಇರೋ ಮಜ ಅನುಭವಿಸಿದವರಿಗೇ ಗೊತ್ತು. ಈ ಅನುಭವವನ್ನು ಮೊನ್ನೆ ಪುನಃ ಪಡೆಯಲು ಅವಕಾಶ ಮಾಡಿಕೊಟ್ಟದ್ದು ಯಾಮಿನಿ - ೨೦೧೦. ಐಐಎಮ್-ಬಿ ವತಿಯಿಂದ ಪ್ರತಿ ವರುಷ ಯಾಮಿನಿ ಎಂಬ ಹೆಸರಿನಲ್ಲಿ ಒಂದು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ http://www.iimb-yamini.com/ ನೋಡಿ. ಯಾಮಿನಿಯ ವಿಷೇಶ ಅಂದ್ರೆ ಸಂಜೆ ೬:೩೦ಗೆ ಪ್ರಾರಂಭವಾಗುವ ಸಂಗೀತ ಕಾರ್ಯಕ್ರಮ, ಇಡೀ ರಾತ್ರಿ ಜಾರಿಯಲ್ಲಿದ್ದು, ಮರುದಿನ ಬೆಳಗ್ಗೆ ೬:೦೦ಗೆ ಮುಕ್ತಾಯವಾಗುತ್ತದೆ. ಈ ಸಲ ನನಗೆ ಈ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಒದಗಿ ಬಂದಿತು.

೨೫ನೇ ತಾರೀಕು ಸಂಜೆ ಹೊರಡಬೇಕು. ಮರುದಿನ ಗಣರಾಜ್ಯೋತ್ಸವವಿದ್ದರಿಂದ ಕಚೇರಿಗೆ ರಜ. ಕಚೇರಿಯಿಂದ ಬೇಗ ಮನೆಗೆ ಬಂದು ಹೊರಡಲು ಸಿದ್ದವಾದೆ. ಮುರಳಿ, ನವೀನ ನನ್ನ ಜೊತೆ ಕೈ ಜೋಡಿಸಿದರು. ಮೂರೂ ಜನ ಎರಡು ವಾಹನಗಳಲ್ಲಿ ಐಐಎಮ್-ಬಿ ಸೇರುವ ಹೊತ್ತಿಗೆ ಸುಮಾರು ೭:೦೦ ಗಂಟೆ ಆಗಿತ್ತು. ನಮ್ಮ ಪುಣ್ಯ, ಕಾರ್ಯಕ್ರಮ ಇನ್ನೂ ಪ್ರಾರಂಬವಾಗಿರಲಿಲ್ಲ. ವೇದಿಕೆಯ ಸಮೀಪದಲ್ಲಿ, ಮೆತ್ತಗಿನ ಹಾಸಿಗೆಗಳನ್ನು ಹಾಸಿದ್ದರು. ಸುಮಾರು ೫೦೦ ಜನ ಸುಲಲಿತವಾಗಿ ಕೂರಬಲ್ಲಷ್ಟು ಜಾಗದಲ್ಲಿ ಹಾಸಿಗೆಗಳನ್ನು ಹಾಸಿದ್ದರು. ಅದರ ಸುತ್ತಲೂ ಇನ್ನೂ ಸುಮಾರು ೫೦೦ ಜನ ಕೂರಬಹುದಾದಷ್ಟು ಕುರ್ಚಿಗಳನ್ನು ಹಾಕಿದ್ದರು. ಚೆಳಿಗೆ ಮೈ ಬಿಸಿಮಾಡಿಕೊಳ್ಳಲು, ಅಲ್ಲಲ್ಲಿ ಬೆಂಕಿಯನ್ನು (ಕಾಂಪ್ ಫೈರ್) ಹಾಕಿದ್ದರು. ಒಟ್ಟಿನಲ್ಲಿ "Holiday mood at its best" ಎಂದು ಅನಿಸಿತು.

ಕಾರ್ಯಕ್ರಮ ನಿತ್ಯಶ್ರೀ ಮಹದೇವನ್ರವರ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಿಂದ ಪ್ರಾರಂಭವಾಯಿತು. ಇವರ ಇತರ ಕಚೇರಿಗಳನ್ನು ಮುಂಚೆಯೇ ಕೇಳಿದ್ದರಿಂದ ಇವರ ಪ್ರತಿಭೆಯ ಅರಿವು ನನಗಿತ್ತು. ಅವರ ಆಲಾಪನ ಶೈಲಿ, ಸ್ವರಕಲ್ಪನೆಗಳ ವೈವಿಧ್ಯತೆಗಳಿಂದ ಜನರನ್ನು ಮೈಮರೆಸಿದರು. ಎರಡೂವರೆ ಗಂಟೆಗಳ ನಂತರ ತಿಲ್ಲಾನದಿಂದ ಅವರು ಮುಗಿಸಿದಾಗ, ಇನ್ನೂ ಸ್ವಲ್ಪ ಹೊತ್ತು ಹಾಡಬಾರದೆ ಎಂದನಿಸಿತು. ಚೆಳಿ, ಹಸಿವು ಯಾವುದೂ ಹತ್ತಿರ ಸುಳಿಯಲಿಲ್ಲ. ಅವರ ಕೆಲವು ಚಿತ್ರಗಳು (ದೂರದಿಂದ ತೆಗದಿದ್ದು) -
ನಿತ್ಯಶ್ರೀ ಅವರ ಗಾಯನ ಮುಗಿಯುವಷ್ಟರಲ್ಲಿ ಸುಮಾರು ೯:೩೦ ಆಗಿತ್ತು. ಅಷ್ಟು ಹೊತ್ತು ತಾಲ್ಮೆಯಿಂದ ಕೂತಿದ್ದ ಜನ, ತಕ್ಷಣ ಎದ್ದು ತಿಂಡಿಗಳ ಮಳಿಗೆಯ ದಿಕ್ಕಿನಲ್ಲಿ ಓಡಿದರು. ನಾವು ಸಮಾಧಾನವಾಗಿ ಎದ್ದು ಹೋಗುವಷ್ಟರಲ್ಲಿ, ಶ್ರೀ ಕೃಷ್ಣ ಭವನದ ಮಳಿಗೆಯಲ್ಲಿ ಜನಸಾಗರವೇ ಇತ್ತು. ಇನ್ನು ಆ ಸಾಲಲ್ಲೇ ಇದ್ದರೆ ಇವತ್ತು ಉಪವಾಸವೇ ಎಂದು, ಸಾಂಡ್ವಿಚ್ ಇಂದಲೇ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಹೊಟ್ಟೆ ಪೂರ್ತಿ ತುಂಬದಿದ್ದರೂ ಜೇಬಿಗೆ ಮಜಬೂತಾದ ಕತ್ತರಿಯೇ ಬಿದ್ದಿತು :-(

ನಂತರದ ಸರದಿ ಪ್ರಸಿದ್ದ ವೀಣಾವಾದಕಿ ಗಾಯತ್ರಿಯವರದ್ದು. ಚಿಕ್ಕ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿತಿದ್ದರೂ ನನಗೆ ರಾಗಗಳ ಜ್ಞಾನ ಕಡಿಮೆ. ರಾಗ, ತಾಳಗಳಿಗಿಂತ ಸಾಹಿತ್ಯದ ಭಾವ ಇಷ್ಟವಾಗುತ್ತದೆ. ಆದ್ದರಿಂದ ವಾದ್ಯಕ್ಕಿಂತ ಗಾಯನದಲ್ಲಿ ಹೆಚ್ಚು ಒಲವು. ಅಷ್ಟಾದರೂ ವೀಣಾವಾದ್ಯದ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟು ಆಕರ್ಶಕ ವೀಣೆ ನುಡಿತವನ್ನು ನಾನು ಎಂದೂ ಕಂಡಿರಲಿಲ್ಲ. ಅದರಲ್ಲೂನಾರಾಯಣ ಸೂಕ್ತ ಸಾಲುಗಳನ್ನು ಉದಾತ್ತ, ಅನುದಾತ್ತ, ಸ್ವರಿತಗಳ ಒಳಗೊಂಡು ವೀಣೆಯಮೂಲಕ ಪಾರಾಯಣ ಮಾಡಿದ್ದು ವಿಶೇಷ. ಬಂದಿದ್ದಕ್ಕೂ, ನಿದ್ದೆಗೆಟ್ಟು ಕೂತಿದ್ದಕ್ಕೂ ಸಾರ್ಥಕ. ವೀಣೇ ಗಾಯತ್ರಿಯವರ ಚಿತ್ರಗಳು -

ಗಾಯತ್ರಿಯವರ ವೀಣಾವಾದನ ಮುಗಿದಾಗ ಮಧ್ಯರಾತ್ರಿ ೧೨:೦೦ ದಾಟಿತ್ತು. ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಮಾಡಿಕೊಳ್ಳಲು ಸ್ವಲ್ಪ ಸಮಯ ವಿರಾಮ.

... (ಸಶೇಷ)

Monday, January 4, 2010

ಹತ್ತರ ಹೊತ್ತುಮತ್ತೊಂದು ಕಾಲ ಘಟ್ಟ ಸಾಗಿ ಹೋಯಿತು. ಇದು ನಮಗೆ ಹೊಸ ವರುಷವೇ? ಹಾಗಾದರೆ ಯುಗಾದಿ ಏನು? ಈ ಪ್ರಷ್ನೆಗಳು ಸಹಜವಾಗಿ ಉದ್ಭವಿಸುತ್ತದೆ. ಆದರೆ ನಾವು ಯಾವುದನ್ನೂ ತಿರಸ್ಕಾರ ಮನೋಭಾವದಿಂದ ನೋಡುವುದನ್ನು ಕಡಿಮೆಮಾಡಿದರೆ ಮನುಜನಕ್ಕೆ ಒಳ್ಳೆಯದು. ಗ್ರೆಗೋರಿಯನ್ ಕಾಲೆಂಡರ್ ಪ್ರಕಾರ ಇದು ಹೊಸ ವರುಷವೇ. ನಾವು ಈ ಹೊಸ ವರುಷದಂದು ಶುಭ ಹಾರೈಸಿದರೆ ನಮ್ಮತನವನ್ನು ಬಿಟ್ಟುಕೊಡುವುದೆಂದಲ್ಲ.


೨೦೦೯ ಕಳೆದು ೨೦೧೦ ಪ್ರಾರಂಭದ ಅವಧಿಯಲ್ಲಿ ನಾವು ನಡೆದುಕೊಂಡು ಬಂದ ದಾರಿಯಲ್ಲಿ ಕಣ್ಣು ಹಾಯಿಸಿದರೆ, ಅದರಿಂದ ಕಲಿಯುವುದು ಬಹಳಷ್ಟಿರಬಹುದು. ಕಳೆದ ಕಾಲೆಂಡರ್ ವರುಷ, ನಮಗೆ ಅಷ್ಟಾಗಿ ಸುಗಮವಾಗಿ ಸಾಗಲಿಲ್ಲ ಎಂದು ಬಹುಮತರ ಅಭಿಪ್ರಾಯ. ವಿರೋಧಿ ಸಂವತ್ಸರದ ಹೆಚ್ಚಿನ ಅವಧಿ ೨೦೦೯ ನಲ್ಲಿ ಕಳೆದು, ಪರಸ್ಪರ ವೈಮನಸ್ಯವೇ ಹೆಚ್ಚಾಗಿ ಬೆಳೆಯುತ್ತಿರುವ ಸೂಚನೆ ಕಾಣುತ್ತಿದೆ. ೨೦೧೨ ರ ಪ್ರಳಯಕ್ಕೆ ಇದೇ ತಳಪಾಯ ಹಾಕಿದಂತಿದೆ ;-)


ನನಗಂತೂ ೨೦೦೯ ಮರೆಯುವಂತಹ ವರುಷವೇ. ವೈಯುಕ್ತಿಕವಾಗಿ, ಸಾಮಾಜಿಕವಾಗಿ ಇಷ್ಟೋಂದು ಸಾವು ಕಂಡಿರಲಿಲ್ಲ. ಕೊನೆಗೆ ಎಲ್ಲವೂ ಇಷ್ಟೆ ಎಂಬ ನಿರ್ಲಿಪ್ತತೆಯ ಮನೋಭಾವ ಹರಿದುಬಂತು. ಅಶ್ವಥ್ ಮತ್ತು ವಿಷ್ನು ಅವರನ್ನು ಕಳೆದುಕೊಂಡ ನಾವೇ ದುರ್ಭಾಗ್ಯವಂತರು. ಮುಂಬರುವ ವರುಷ ನಮ್ಮ ಸ್ವಾರ್ಥ, ವೈಮನಸ್ಯವನ್ನು ಹೋಗಲಾಡಿಸಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಹೊಸ ವರುಷದ ಶುಭಾಷಯಗಳು.


೨೦೧೦ಯನ್ನು ಈ ಮನುಸ್ಮೃತಿಯ ಶ್ಲೋಕದಿಂದ ಪ್ರಾರಂಭಿಸುತ್ತಿದ್ದೇನೆ.


ಪರಿತ್ಯಜೇದರ್ಥಕಾಮೌ ಯೌ ಸ್ಯಾತಾಂ ಧರ್ಮವಿರ್ಜತೌ
ಧರ್ಮಚಾಪ್ಯಸುಖೋದರ್ಕ ಲೋಕನಿಕೃಷ್ಟಮೇವ ಚ


ಅರ್ಥ: ಧರ್ಮದಿಂದ ತಿರಸ್ಕೃತವಾದ ಧನವನ್ನು ಸ್ವೀಕಾರವಾಗದಿರಲಿ. ಧರ್ಮದಿಂದ ಭವಿಷ್ಯದಲ್ಲಿ ಮನುಜ ಜನಾಂಗಕ್ಕೆ/ಪ್ರಕೃತಿಗೆ ನೋವು ಉಂಟಾದರೆ, ಈ ಧರ್ಮವೇ ಸ್ವೀಕಾರವಾಗದಿರಲಿ.


ಇದು ಮನುಸ್ಮೃತಿಯಲ್ಲೇ ಹೇಳಿದೆ. ಹಾಗಾದರೆ, ಧರ್ಮ ಬದಲಾಗುತ್ತದೆಯೇ ಎಂಬ ಪ್ರಶ್ನೆ ಸಹಜ. ಇಲ್ಲಿ ’ಧರ್ಮ’ ಎಂದರೆ ಯುಗಧರ್ಮ ಎಂಬ ಅರ್ಥ. ಸನಾತನ ಧರ್ಮವಲ್ಲ. ಸನಾತನ ಧರ್ಮ ಬದಲಾಗುವುದಿಲ್ಲ. ಆದರೆ ಸಮಯಕ್ಕೆ ತಕ್ಕಹಾಗೆ ನಮ್ಮ ನಡವಳಿಕೆಗಳನ್ನು ಮಾರ್ಪಾಡಿಸಬೇಕೆಂಬುದಾಗಿ ಮನುವೇ ಹೇಳಿರುವಂತಿದೆ (ಮಾರ್ಪಾಡು ಸನಾತನಧರ್ಮದ ಚೌಕಟ್ಟಿನಲ್ಲಿ). ಇದರ ವಿಸ್ತಾರವಾದ ಅರ್ಥ ತಿಳಿದವರು ಹಂಚಿಕೊಳ್ಳಬಹುದು.

ಚಿತ್ರ: ಅಂತರ್ಜಾಲ

Tuesday, December 1, 2009

ವೃತ್ತಿಧರ್ಮದ ದ್ವಂದ್ವ

ನಾನು ಒಬ್ಬ "ಐಟಿ"ಗ. "ಐಟಿ" ಎಂದ ತಕ್ಷಣ ನಮ್ಮ ಮನಸ್ಸಿಗೆ ಹಲವಾರು ಗುಣಗಳು ಮೋಡುವುದು ಸಹಜ. ಬೆಂಗಳೂರಿನಲ್ಲಿ ಇರುವವರಿಗೆ ಇದರ ಬಗ್ಗೆ ಗೊತ್ತಿರುವುದು ಸರ್ವೇ ಸಾಮಾನ್ಯ.


ಪ್ರಶ್ನೆ: ಮತ್ತೆ ಇವಾಗ ಯಾಕಪ್ಪಾ ಇದರ ಬಗ್ಗೆ ಚರ್ಚೆ?
ಉತ್ತರ: ಇತ್ತೀಚಿನ ದಿನಗಳಲ್ಲಿ ನನ್ನ ತಲೆಯಲ್ಲಿ ಕೊರೆಯುತ್ತಿರುವ ವಿಷಯದ ಹುಳ ನಿಮಗೂ ಹಾಕೋಣಾ ಅಂತ.


ಭಾರತೀಯರು ತಮ್ಮ ಪುರಾತನ ಐತಿಹಾಸಿಕ ಸಂಸ್ಕೃತಿಯನ್ನು ಪಾಲಿಸುತ್ತಿಲ್ಲ ಅಂತ ದೂರುವವರು ಇದ್ದಾರೆ. ಒಂದು ರೀತಿಯಲ್ಲಿ ಅದು ಸತ್ಯವೇ (ಇದರ ಬಗ್ಗೆ ಚರ್ಚೆ ಬೇಡ). ಆದರೆ ಇದಕ್ಕೆ ’ಐಟಿ’ಯೇ ಕಾರಣ ಅಂತ ಹೇಳುವವರಿದ್ದಾರೆ. ಐಟಿನವರಿಂದಲೇ ಗಾರ್ಡನ್ ಸಿಟಿ ಪಬ್ ಸಿಟಿಯಾಯಿತು, ಅಂತ ನಮ್ಮನ್ನೇ ದೂಷಿಸ್ತಾರೆ.


ಪ್ರಶ್ನೆ: ಇದನ್ನೆಲ್ಲಾ ನೀನು ನಂಬ್ತೀಯಾ?
ಉತ್ತರ: ಗೊತ್ತಿಲ್ಲ. ಆದರೆ ನನಗೆ ತಿಳಿದವರ ವೃತ್ತಿಯಲ್ಲಿ ತಮ್ಮ ಮನೆತನದ ಆಚರಣೆಗಳನ್ನು ಕಳಚಿ, ತಮ್ಮ ಐಟಿ ಕೆಲಸವೇ ಮಹಾನ್ ಕಾರ್ಯ, ಸಮಯವೆಲ್ಲಾ ಈ ಕೆಲಸಕ್ಕೇ ಹಾಕಬೇಕು ಎಂದು ಹೇಳುವವರೇ ಹೆಚ್ಚು ಇದ್ದಾರೆ.


ಐಟಿ ಕೆಲಸ, ಸಮಾನ್ಯ ಬೇರೆ ಎಲ್ಲ ಕೆಅಸಗಳಂತೆ ಒಂದು ಅಷ್ಟೆ. ಆದರೆ ನಮಗೆ ಅದು ಹೆಚ್ಚು ದಿಮಾಂಡಿಂಗ್ ಅಂತ ಅನಿಸುವುದು ಅದರ ಕಾಂಪಿಟಿಟಿವ್ನೆಸ್ಸ್ ಇಂದ. ಅಂದರೆ, ನಾನು ನನ್ನ ಕೆಲಸಗಳನ್ನು ಮುಗಿಸುವುದಕ್ಕೆ ಇಷ್ಟು ಸಮಯ ಬೇಕು ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದರೆ, ಅದು ಬೇರೆಯವರು ಎಷ್ಟು ಕೆಲಸ ಮಾಡುತ್ತಾರೆ ಅನ್ನುವುದರ ಆದಾರದ ಮೇಲೆ ನಿಂತಿದೆ.


ಪ್ರಶ್ನೆ: ಇಂತಹ ಕಾಂಪಿಟಿಟಿವ್ನೆಸ್ಸ್ ಬೇರೆ ಕ್ಷೇತ್ರದಲ್ಲು ಇರಬಹುದಲ್ಲಾ?
ಉತ್ತರ: ಇರಬಹುದು. ಆದರೆ ಬೇರೆ ಕ್ಷೇತ್ರದಲ್ಲಿ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತುಹಾಕುವುದು ಕಡಿಮೆ. ಕೆಲಸದ ಭಯ (ಇನ್ಸೆಕ್ಯೂರಿಟಿ ಫೀಲಿಂಗ್) ಐಟಿಯಲ್ಲಿ ಹೆಚ್ಚು.


ಪ್ರಶ್ನೆ: ಬೇರೆ ಎಷ್ಟೋ ಜನ ಕೆಲಸ ಕಳ್ಕೊಂಡಿಲ್ವಾ? ಬಾಂಕು, ಸಪ್ಪೋಟು ಇಟಿಸಿ.
ಉತರ: ಹೌದು. ಇಲ್ಲಿ ಐಟಿ ಅಂದರೆ ಎಮ್‍ಎನ್‍ಸಿ ಅಂತ ಹೇಳ್ಬಹುದಾ ಹಾಗಿದ್ದರೆ? ಎಮ್‍ಎನ್‍ಸಿನವರಿಗೆ ಮಾನವೀಯತೆ ಸ್ವಲ್ಪ ಕಡಿಮೆ ;-)


ವೈಯಕ್ತಿಕವಾಗಿ ನಾನು ಇಂತಹ ಮಾತುಗಳನ್ನು ಒಪ್ಪುವುದುಲ್ಲ. ನಾನು ಕೂಡ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿತ್ತಿದ್ದೀನಿ. ಆದರೆ ನನ್ನ ಕೆಲಸ ನನ್ನ ಪ್ರವೃತ್ತಿಗೆ ಅಡ್ಡಿ ಬಂದಿತೆಂದು ನನಗೆ ಅನಿಸುವುದಿಲ್ಲ. ಆದರೆ ಐಟಿನವರು ತಮ್ಮ ಮನೆತನದ ಸಂಸ್ಕೃತಿಯನು ಮರೆಯುತ್ತಿರುವುದು ನಿಜವಲ್ಲವೇ? ಸೋ ... ಇಲ್ಲಿ (ಐಟಿನಲ್ಲಿ) ಅದೊಂತರಾ ಸೆಳೆತನ ಇದೆ ಅಂತ ಅರ್ಥ ಅಲ್ವಾ? ನನ್ನಲ್ಲೂ ಈ ಆಕರ್ಷಣೆ ಮೂಡಿದ್ರೆ? ನಾನೂ ಹೀಗೇ ಎಲ್ಲರಂತೆ ಇಲ್ಲೇ ಕೊಳಿಬೇಕಾ? ಇದಿಲ್ಲದಿದ್ದರೆ ಏನು ಮಹಾ? ಸುಮ್ಮನೆ ಇಲ್ಲಿಂದ ಹೊರಗೆ ಬಂದು ಮತ್ತೇನಾದರೂ ಮಾಡುವುದರ ಬಗೆ ಯೋಚಿಸಬಹುದಲ್ಲವೇ!!


ಪ್ರಶ್ನೆ: ಯಾಕೆ ಕೆಲಸ ಬೀಡಬೇಕು? ಕೆಲಸ ಇಷ್ಟ ಆಗ್ತಿಲ್ವಾ?
ಉತ್ತರ: ಕೆಲಸ ಇಷ್ಟ. ನನಗೇನು ತೊಂದರೆ ಇಲ್ಲ ಇಲ್ಲಿ. ಒಳ್ಳೆ ಹೆಸರೂ ಇದೆ. ಯಾರ ಜೊತೆನೂ ಜಗಳವಾಡಿಲ್ಲ. ನಾನೇನು ರಾತ್ರಿಯೆಲ್ಲ ಕೂತು ಕೆಲಸ ಮಾಡ್ಬೇಕಿಲ್ಲ. ಬರಿ ೬ ಗಂಟೆವರಿಗೆ ಅಷ್ಟೆ. ಆದರೆ ಬೇರೆಯವರ ದೃಷ್ಟಿಕೋನ ಬೇರೆ ರೀತಿಯಲ್ಲಿ ಇದೆ. ಮಾತುಮಾತಿಗೂ ಅವರು ಕೇಳುವ ಪ್ರಶ್ನೆ "ನೀನು ಐಟಿನಲ್ಲಿ ಇದಿಯಾ. ಯಾವ ತೊಂದರೆಯೂ ಇಲ್ಲ. ಅದಕ್ಕೆ ನಿನಗೆ ನಮ್ಮ ಕಷ್ಟ ಅರ್ಥ ಆಗಲ್ಲ" ಅಂತ. ಮುಂದೆ ನಾನೇನು ಮಾತಾಡ್ಲಿ?


ಪ್ರಶ್ನೆ: ಇದನ್ನು ಬಿಟ್ಟು ಇನ್ನೇನು ಮಾಡ್ಬೇಕು ಅಂತ ಯೋಚನೆ ಮಾಡ್ತಿದೀಯ?
ಉತ್ತರ: ಗೊತ್ತಿಲ್ಲ.


ಪ್ರಶ್ನೆ: ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುವ ಪ್ಲಾನ್?
ಉತ್ತರ: ನನ್ನ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ಹೋಗಬೇಕಾದರೆ ಕೆಲವೊಂದು ಅರ್ಹತೆಗಳಿರಬೇಕು. ಈಗ ಸಧ್ಯಕ್ಕೆ ಅದು ನನಗೆ ಇದೆ ಅಂತ ನನಗೆ ಅನಿಸುತ್ತಿಲ್ಲ. ಸುಮ್ಸುಮ್ನೆ ಎಲ್ಲರೂ ಅಲ್ಲಿಗೆ ಹೂಗಕ್ಕಾಗಲ್ಲ.


ಪ್ರಶ್ನೆ: ಮುಂದೆ ಏನು ಅಂತ ಗೊತ್ತಿಲ್ದೇನೆ ಇದ್ದರೆ ಹೇಗೆ? ಹೊಟ್ಟೆಗೆ ಏನು ಮಾಡ್ತೀಯ?
ಉತ್ತರ: ದೇವರು ಏನಾದ್ರು ಒಂದು ದಾರಿ ತೋರಿಸ್ತಾನೆ.


ಪ್ರಶ್ನೆ: ನಿನಗೆ ಇನ್ನೂ ಮದುವೆ ಕೂಡ ಆಗಿಲ್ಲ. ಕೆಲಸಾನೂ ಇಲ್ಲದಿದ್ರೆ ನಿನಗೆ ಯಾರು ಹೆಣ್ಣು ಕೊಡೊಲ್ಲ.
ಉತ್ತರ: !!!


ಪ್ರಶ್ನೆ: ಉದ್ಯೋಗಂ ಪುರುಷಲಕ್ಷಣಂ.
ಉತ್ತರ: ಹೌದು. ಆದರೆ ಉದ್ಯೋಗ ಅಂದ್ರೆ ಏನು? ದುಡ್ದು ಸಂಪಾದಿಸುವ ಕೆಲಸಮಾತ್ರವೇ ಉದ್ಯೋಗವೇ? ಮನೆಯಲ್ಲಿ ಗಾರ್ಡನಿಂಗ್, ವೇದಪಾಠ, ಬ್ಲಾಗಿಂಗ್, ಸಮಾಜ ಸೇವೆ, ಓದು, ಅಂತ ಆಕ್ಟಿವ್ ಆಗಿ ಇದ್ದರೆ ಅದು ಉದ್ಯೋಗ ಅಂತ ಅನ್ನಿಸ್ಕೊಳಲ್ವಾ? ಬರೀ ದುಡ್ಡಿನಿಂದ ಇದನ್ನು ಅಳಿಯಬೇಕಾ?
....
....
ಪ್ರಶ್ನೆ: ಇವಾಗ ಏನು ನಿನ್ನ ಪ್ರಾಬ್ಲಮ್ಮು?
ಉತ್ತರ: ಇವತ್ತು "ವಿಶ್ವ ಮಂಗಲ ಗೌ ಗ್ರಾಮ ಯಾತ್ರೆ"ಯ ಸಮಾವೇಶ ಬೆಂಗಳೂರಿನಲ್ಲಿ ಇದೆ. ಆದರೆ ನನಗೆ ಹೋಗಕ್ಕೆ ಅಗ್ತಿಲ್ಲ. ಇಲ್ಲಿ ನನ್ನನ್ನು ಯಾರು ಕಾಟ್ಟಾಕಿಲ್ಲ. ಆದರೆ ವೃತ್ತಿಧರ್ಮ ಅಂತ ಇದೆಯಲ್ಲಾ? ನನ್ನ ಜವಾಬ್ದಾರಿಯನ್ನ ಬಿಟ್ಟು ಹೋಗಕ್ಕೆ ಮನಸ್ಸಿಲ್ಲ. ಬಿಡುವುದಕ್ಕೂ ಮನಸ್ಸಿಲ್ಲ.


ಓಓಓ ಹಾಗೆ!!!


ಎಲ್ಲವೂ ದ್ವಂದ್ವಮಯವಾಗಿದೆ. ಇಷ್ಟೊತ್ತು ಏನೇನು ಬರ್ದೆ ಅಂತ ಕೂಡ ಗೊತ್ತಾಗ್ತಿಲ್ಲ. ನಿಮಗೇನಾದ್ರು ಅರ್ಥ ಆಯ್ತಾ?

ಚಿತ್ರ: ಅಂತರ್ಜಾಲ

Saturday, November 14, 2009

ಮಾಮಕಾಃ ಪಾಂಡವಾಶ್ಚೈವ


ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ

ಮಾಮಕಾಃ ಪಾಂಡವಾಶ್ಚೈವ ಕಿಮ ಕುರ್ವತ ಸಂಜಯ


ಭವದ್ಗೀತೆಯ ಈ ಸಾಲು ಎಲ್ಲರಿಗೂ ಚಿರಪರಿಚಿತ. ಕುರುಕ್ಷೇತ್ರ ಮಹಾಯುದ್ಧದ ಮೂಲ ಕಾರಣ, ಈ ಒಂದು ಸಾಲು ಎತ್ತು ತೋರಿಸುತ್ತದೆ. ಮಹಾರಾಜ ಧೃತರಾಷ್ಟ್ರ, ಸಂಜಯನಿಗೆ ಹೇಳುವ ಮಾತಿದು. ಕುರುಕ್ಷೇತ್ರದ ಯುದ್ಧದಲ್ಲಿ ನಡೆಯುವ ಪ್ರಸಂಗಗಳನ್ನು ವಿವರಿಸುವಂತೆ ಸಂಜಯನಿಗೆ ಹೇಳುತ್ತಾನೆ. ಇಲ್ಲಿ ಕೌರವರನ್ನು "ಮಾಮಕಾಃ" ಎಂಬಲ್ಲಿ "ನನ್ನವರು ಮತ್ತು ಪಾಂಡವರು" ಎಂದು ಒಂದೇ ಮನೆಯಲ್ಲೇ ಇದ್ದು ಬೆಳೆದ ಕೌರವ-ಪಾಂಡವರನ್ನು ಬೇರೆಬೇರೆಯಾಗೇ ಕಾಣುತ್ತಾನೆ. ಮೊನ್ನೆ "ವಂದೇ ಮಾತರಮ್" ಹಾಡಿಗೆ ಫತ್ವಾ ಹೊರಡಿಸಲಾಗಿದೆ. ಕಾರಣ, ಮುಸಲ್ಮಾನರು ಬೇರೆ ಯಾರನ್ನೂ ಪೂಜಿಸಬಾರದೆಂದು. ಇವರಿಗೂ ಅಂಧ ಧೃತರಾಷ್ಟ್ರನಿಗೂ ಇರುವ ವ್ಯತ್ಯಾಸ ಇಷ್ಟೇ, ಆ ಅಂಧರಾಜ ರಾಷ್ಟ್ರದ ಹಿತದ ಬಗ್ಗೆ ಯೋಚಿಸದೆ, ತನ್ನ ಮಕ್ಕಳ ಅಧಿಕಾರದ ಸ್ವಾರ್ಥ ಮನೋಭಾವವನ್ನೇ ಬೆಳೆಸಿಕೊಂಡು ಬಂದ. ಇವತ್ತು ಒಂದು ಮತದ ಸ್ವಾರ್ಥಕ್ಕೆ ರಾಷ್ಟ್ರವನ್ನು ಪೂಜಿಸುವ ಗೀತೆಯನ್ನು ತಡೆದು ನಿಲ್ಲಿಸುವ ಪ್ರಯತ್ನ.


ಕುರುಕ್ಷೇತ್ರ ಯುದ್ದದ ಪ್ರಾರಂಭದಲ್ಲಿ ಅರ್ಜುನ ತನ್ನ ಶಸ್ತ್ರಾಸ್ತ್ರಗಳನ್ನು ಕಳಚಿ, ಕೆಳಗಿಟ್ಟು ತಾನು ಯುದ್ಧ ಮಾಡುವುದಿಲ್ಲವೆಂದು ಹೇಳುತ್ತಾನೆ. ಕಾರಣ, ತನ್ನ ಶತ್ರುಸೈನ್ಯದಲ್ಲಿ ಅವನಿಗೆ ಎಲ್ಲರೂ ತನ್ನವರೇ ಕಾಣಿಸುತ್ತಾರೆ (ಸ್ವಜನೇ ಶತೃಸೈನ್ಯೆ). ಕೌರವರಿಗೂ ಪಾಂಡವರಿಗೂ ಇದ್ದ ವ್ಯತ್ಯಾಸ ಈ ಮನೋಭಾವವೇ. ಆದರೆ ತನ್ನವರು ಎಂಬ ಮಮಕಾರಕ್ಕಿಂತ, ರಾಷ್ಟ್ರದ ಹಿತ ಮುಖ್ಯ, ಧರ್ಮವನ್ನು ಕಾಪಾಡುವುದಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ಶ್ರೀ ಕೃಷ್ಣ ನಮಗೆಲ್ಲರಿಗೂ ಗೀತೆಯ ಮೂಲಕ ಸಂದೇಶವನ್ನು ಕೊಟ್ಟಿದ್ದಾನೆ. ಭಗವದ್ಗೀತೆಯ ಪೂರ್ಣ ಸಾರವನ್ನು ತಿಳಿಯಬೇಕಾದರೆ, ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ತಿಳಿಯಬೇಕು.


ವಂದೇ ಮಾತರಮ್ ವಿರುದ್ಧ ಮಾತುಗಳು ಕೇಳುತ್ತಿರುವುದು ಇದೇನು ಮೊದಲನೆಯ ಸಲವಲ್ಲ. ಆದರೆ ಎಷ್ಟು ಸಲ ಇದರ ಬಗ್ಗೆ ಮಾತಾದರೂ, ಇದರ ಬಗ್ಗೆ ಹೆಚ್ಚು ಜನ ಕಾಳಜಿಯನ್ನೇ ತೋರಿಸುವುದಿಲ್ಲ. ಅದು ತಪ್ಪಲ್ಲ. ಕೆಟ್ಟದ್ದನ್ನು ಇಗ್ನೋರ್ ಮಾಡುವುದು ಒಂದು ರೀತಿಯಲ್ಲಿ ಒಳ್ಳೆಯದು. ಇತಿಹಾಸವು ನಮಗೆ ತೋರಿಸುವ ಘೋರಾತಿಘೋರ ವನ್ನಿವೇಷಗಳನ್ನು ನಾವು ಎಷ್ಟು ಬೇಗ ಮರೆತುಬಿಡುತ್ತೇವೆ ಅಲ್ಲವೇ? ಎಲ್ಲವನ್ನೂ ಮರೆತರೆ ಇತಿಹಾಸ ಓದುವುದಾದರೂ ಯಾಕೆ?


ರಮಾಯಣದಲ್ಲಿ ಕೈಕೇಯಿ-ಮಂತರರ ಪಿತೂರಿಯಿಂದ ರಾಮ ಕಾಡಿಗೆ ಹೋಗಬೇಕಾಯಿತು. ಕೈಕೇಯ ರಾಜ್ಯ ಈಗಿನ ಅಫ್ಗಾನಿಸ್ಥಾನ್-ರಶ್ಶ್ಯಾ ಬಾರ್ಡರ್. ಅವರು ಭಾರತಕ್ಕೆ ಬಂದಿದ್ದು ಈಗ ಭಯೋತ್ಪಾದಕರು ಬರುತ್ತಿರುವ ದಾರಿಯಲ್ಲೇ. ಮಹಭಾರತದಲ್ಲಿ, ಗಾಂಧಾರಿ-ಶಕುನಿಯರು ಕೂಡ ಬಂದಿದ್ದು ಅದೇ ದಾರಿಯಲ್ಲೇ. ಈಗಲೂ ನಾವು ಈ ದಾರಿಯನ್ನು ಮುಕ್ತವಾಗಿ ಓಡಾದಲು ಬಿಡುತ್ತಿದ್ದೇವೆ. ಭಾರತೀಯರು ಎಷ್ಟು ಕರುಣಾಮಯಿಗಳು. ಎಲ್ಲರಿಗೂ "ಬನ್ನಿ ಬನ್ನಿ, ನಮ್ಮನ್ನು ದೋಚಿ, ನೀವು ಸುಖವಾಗಿರಿ" ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಇಂತಹವರನ್ನು ತನ್ನ ಭೂಮಿಯಲ್ಲಿ ಹೆತ್ತಿದ್ದಕ್ಕೆ ಭಾರತ ಮಾತೆ ಎಷ್ಟು ಸಂತೋಶ ಪಡುತ್ತಿದ್ದಾಳೋ.


ದ್ವಾಪರಯುಗದಲ್ಲಿ ಶ್ರೀ ಕೃಷ್ಣ, ಸಮುದ್ರದ ನೆಲದಲ್ಲೇ ದ್ವಾರಕೆಯೆಂಬ ನಗರವನ್ನು ನಿರ್ಮಾಣ ಮಾಡಿದ. ಸಮುದ್ರದಿಂದ ಬರುವ ಅಪಾಯಗಳಿಂದ ರಾಷ್ಟ್ರವನ್ನು ಕಾಪಾಡಬೇಕೆಂಬ ಹಿತದೃಷ್ಟಿಯಲಿ. ನಂತರ ಏನಾಯಿತು ನೋಡಿ. ಮಹಮ್ಮದ್ ಘಝ್ನಿ ಸಮುದ್ರಿಂದ ದಾಳಿ ನಡೆಸಿ ಸೊಮನಾಥ ದೇವಾಲಯವನ್ನು ಮಟ್ಟ ಹಾಕಿದ ಎಂದು ಕೇಳ್ಪಟ್ಟೆ. ಇತ್ತೀಚೆಗೆ ನಡೆದ ಮುಂಬೈ ದಾಳಿಯಲ್ಲಿ ಕೂಡ ಭಯೋದ್ಪಾದಕರು ಸಮುದ್ರದಿಂದ ಬಂದಿಳಿದಿದ್ದರು. ಆದರೆ ನಾವು ಭಾರತೀಯರು ತೆರೆದ ಹೃದಯದಿಂದ ಎಲ್ಲರನ್ನೂ ಒಪ್ಪಿಕೊಳ್ಳಬೇಕಲ್ಲವೇ? ಅದಕ್ಕೇ ಹೊಸ ಭದ್ರಕೋಟೆಗಳನ್ನು ಕಟ್ಟುವುದಿಲ್ಲ. ಬೇರೆಯವರು ನಮ್ಮ ಮೇಲೆ ಎಷ್ಟು ಕೈ ಮಾಡಿದರೂ ನಾವು ಅಂತಹ ದುಃಸಾಹಸಕ್ಕೆ ಕೈ ಹಾಕುವುದಿಲ್ಲ. ಸುಭಾಶ್ ಚಂದ್ರ ಬೋಸ್ ಅವರ "ಇಂಡಿಯನ್ ನಾಶನಲ್ ಆರ್ಮಿ" ಇಂದ ನಮಗೆ ಸ್ವಾತಂತ್ರ್ಯ ಬಂದಿದ್ದು ನಿಜವಾದರೂ, ನಾವು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ ನಾವು ಅಹಿಂಸಾವಾದಿಗಳಲವೇ?


ಅರ್ಜುನ, ಚಂದ್ರಗುಪ್ತರು ನಮಗೆ ಸಿಗಬಹುದೇನೋ. ಆದರೆ ಅವರ ಸಾರಥಿಯಾಗಿ ಒಬ್ಬ ಶ್ರೀ ಕೃಷ್ಣ, ಚಾಣಕ್ಯ ಅಥವಾ ವಿವೇಕಾನಂದ ಬರಬಾರದೇ?

Wednesday, October 28, 2009

೫೦೦ರ ಸಂಭ್ರಮ


ಇತ್ತೀಚಿನ ಪ್ರವಾಹದಿಂದ ಉತ್ತರ ಕರ್ನಾಟಕ ಇನ್ನೂ ಸುಧಾರಿಕೊಳ್ಳುತ್ತಿದೆ. ಇನ್ನೆಷ್ಟು ವರುಷಗಳು ಬೇಕೋ ಮೊದಲಿನಂತಾಗಲು! ಹಪಿಯ ಧ್ವಂಸ ನೋಡಿದಾಗ ನೆನಪಾಗುವುದು, ವಿಜಯನಗರದ ಸಾಮ್ರಾಜ್ಯ. ೩೦೦ಕ್ಕೂ ಹೆಚ್ಚು ವರುಷಗಳ ಕಾಲ ಮುಸಲ್ಮಾನ ದಾಳಿಕೋರರ ಆಕ್ರಮಣದಿಂದ ದಕ್ಷಿಣ ಭಾರತವನ್ನು ರಕ್ಷಿಸಿದ ನಮ್ಮ ವಿಜಯನಗರ ಸಾಮ್ರಾಜ್ಯ, ಇತಿಹಾಸದಲ್ಲಿ ಒಂದು ಮಾದರಿಯ ಸಾಮ್ರಾಜ್ಯ ಎಂದೆನಿಸಿಕೊಂಡಿತು. ನಂತರ ಬಂದ ಶಿವಾಜಿ, ವಿಜಯನಗರದ ನಕಾಶೆಯನ್ನು ಪರಿಶೀಲಿಸಿ, ಅದೇ ರೀತಿಯ ಹೈಂದವಿ ಸಾಮ್ರಾಜ್ಯವನ್ನು ಕಟ್ಟಬೇಕೆಂದು ಸತತವಾಗಿ ಪ್ರಯತ್ನಿಸಿದ. ಇಂತಹ ಮೆಚ್ಚುಗೆಯನ್ನು ಪಡೆದ ಕ್ಷೇತ್ರ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.

ರಮರಾಯನನ್ನು ಮೋಸದಿಂದ ಸೋಲಿಸಿ, ವಿಜಯನಗರವನ್ನು ತನ್ನ ಕೈವಷಕ್ಕೆ ತೆಗೆದುಕೊಂಡ ಸುಲ್ತಾನರು, ೫ ತಿಂಗಳು ಸತತವಾಗಿ ಲೋಟಿಮಾಡಿ, ದೇವಾಲಯಗಳನ್ನು ಕೆಡವಿದರೂ, ಉಳಿದು ನಿಂತ ಅವಶೇಷಗಳು ಕೂಡ, ವಿಜಯನಗರದ ವೈಭವವನ್ನು ಕೂಗಿ ಹೇಳುತ್ತಿದೆ. ವಿಜಯನಗರದ ಸಿರಿವಂತಿಕೆ ಎಂದ ಕೋಡಲೇ ನಮ್ಮ ತಲೆಗೆ ತೋರುವುದು ಕೃಷ್ಣದೇವರಾಯ. ಕೃಷ್ಣದೇವರಾಯ ವಿಜಯನಗರದ ಪಟ್ಟಕ್ಕೆ ಏರಿದ್ದು ೧೫೦೯ ನಲ್ಲಿ. ಅಂದರೆ ಸೆರಿಯಾಗಿ ೫೦೦ ವರುಷಗಳ ಹಿಂದೆ. ಇದು ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭರತಕ್ಕೆ, ಭಾರತೀಯರಿಗೆ ಸಂಭ್ರಮದ ನೆನಪು.

ತಾನು ಪಟ್ಟಭಿಷಿಕ್ತನಾದ ಒಡನೆ ಕೃಷ್ಣದೇವರಾಯ ತನ್ನ ರಾಜ್ಯವನ್ನು ಬಲಪಡಿಸುವ ಕೆಲಸಕ್ಕೆ ತೊಡಗಿದ. ನೆರೆಹೊರೆಯ ರಾಜ್ಯಗಳು ತನ್ನ ರಾಜ್ಯದತ್ತ ಕಣ್ಣೆತ್ತಿಯೂ ನೋಡದಂತ ಸನ್ನಿವೇಶವನ್ನು ನಿರ್ಮಿಸಿದ್ದ. ಒರಿಸ್ಸಾದ ಕಳಿಂಗ ರಾಜ್ಯವನ್ನೂ ಗೆದ್ದು, ಹಂಪಿಯಿಂದ ಸಾವಿರಾರು ಮೈಲು ದೂರದಲ್ಲೂ ಲಕ್ಷಗಟ್ಟಲೆ ಸೈನಿಕರನ್ನು, ಅವರಿಗೆ ಬೇಕಾಗುವ ಸಾಮಗ್ರಿಗಳು, ಹಣಕಾಸು, ಶಸ್ತ್ರಾಸ್ತ್ರ ಎಲ್ಲವನ್ನೂ ಯೋಜಿಸಿದ್ದ. ಭರತಖಂಡದ ಪ್ರತಿಯೊಬ್ಬ ರಾಜನೂ ಬೆಚ್ಚುಬೀಳುವಂತೆ ಮಾಡಿದ್ದ. ಇದು ತನ್ನ ಮೊದಲ ನಾಲ್ಕೈದು ವರುಷಗಳ ಆಡಳಿತದಲ್ಲಿ ಮಾಡಿದ ಕೆಲಸ. ನಂತರ ರಾಜ್ಯದೊಳಗಿನ ಅಭಿವೃದ್ಧಿಯತ್ತ ಗಮನ ಹರಿಸಿದ. ಇದನ್ನು ಭಾರತ ಸ್ವಾತಂತ್ರ್ಯ ಪಡೆದ ಮೊದಮೊದಲ ಕಾಲಕ್ಕೆ ಹೋಲಿಸಿದರೆ, ನಮ್ಮ ದೇಶದ ಈಗಿನ ಸ್ಥಿತಿಗೆ ಏನು ಕಾರಣ ಎಂದು ಸ್ಪಷ್ಟವಾಗಿ ಕಾಣುತ್ತದೆ.

ತುಂಗಭದ್ರೆಯಿಂದ ಕಾಳುವೆಗಳ ಮೂಲಕ ಎಲ್ಲೆಡೆ ನೀರು ಹರಿಯುವಂತೆ ಮಾಡಿದ. ಅಂದು ಆರಂಭಗೊಂಡ ಪರಿಪಾಠ ಇಂದಿಗೂ ಮುಂದುವರಿಯುತ್ತಿದೆ ಎಂದು ಕೇಳ್ಪಟ್ಟೆ. ತುಂಗಭದ್ರೆ ಸಾಗಿ ಕೃಷ್ಣೆಯನ್ನು ಸೇರುವಷ್ಟು ಉದ್ದಕ್ಕೂ ರೈತರು ಏರ್ಪಡಿಸಿರುವ ವ್ಯವಸ್ಥೆ ಕಣ್ಣಾರೆ ನೋಡಬಹುದು ಎಂದು ನೋಡಿದವರು ಹೇಳುತ್ತಾರೆ. ಕೃಷ್ಣದೇವರಾಯ ಕಾಲುವೆ, ಜಲಾಶಯಗಳನ್ನು ಮಾತ್ರವಲ್ಲ, ದೇವಾಲಯಗಳನ್ನು, ವಿಧ್ಯಾಸಂಸ್ಥೆಗಳನ್ನು, ಕಲ್ಯಾಣ ಮಂಟಪಗಳನ್ನು, ಮತ್ತಿತರ ಜನೋಪಯೋಗಿ ಸಂಸ್ಥೆಗಳನ್ನು ನಿರ್ಮಿಸಿದ. ಇದರ ಪರಿಣಾಮವೇ ಇಡೀ ರಾಜ್ಯ ಸುಭೀಕ್ಷೆಯಿಂದ ಇದ್ದು ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು.

ಕೃಷ್ಣದೇವರಾಯನ ನಂತರ ಬಂದ ವಿಜಯನಗರದ ಅರಸರು, ಇದೇ ರೀತಿ ಮುಂದುವರೆಸಿದ್ದರೆ, ಹಂಪಿ ದುಸ್ಥಿತಿಯನ್ನು ಕಾಣಬೇಕಾಗಿರುತ್ತಿರಲಿಲ್ಲವೋ ಏನೋ. ಇತಿಹಾಸದ ಪುಟಗಳಲ್ಲಿ ಇಷ್ಟೆಲ್ಲಾ ಇದ್ದರೂ, ನಮ್ಮ ಬುದ್ದಿಜೀವಿಗಳು ಕೇಳುವ ಪ್ರಶ್ನೆ "ಕೃಷ್ಣದೇವರಾಯ ಕನ್ನಡಕ್ಕೆ ಏನು ಮಾಡಿದ? ಅವನ ಪುಸ್ತಕಗಳು ತೆಲುಗಿನಲ್ಲಿದೆ ಅಲ್ಲವೇ?". ಕೆಲವರಿಗೆ ವಾದ ಮಾಡುವುದರಲ್ಲೇ ಹೆಚ್ಚುಗಾರಿಕೆ. ಆಂಧ್ರದ ರಮಾರಮಣನ ಆದ ಮಾತ್ರಕ್ಕೆ ಕನ್ನಡರಾಯ ಆಗಬಾರದು ಎಂದು ಅರ್ಥವೇ?

ಹಳೆಯ ನೆನಪು, ಈಗಿನ ಮಾತು, ದೃಷ್ಯಗಳು ನಮ್ಮ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ. ರಾಜಕಾರಿಣಿಗಳನ್ನ ದೂಷಿಸುವುದು ದಂಡ. ಬೆಳೆದ ಮರವನ್ನು ಬಗ್ಗಿಸುವುದು ಕಷ್ಟ. ಹೊಸದಾಗಿ ಬರುವ ಗಿಡಗಳನ್ನು ಸೆರಿಯಾಗಿ ನೋಡಿಕೊಳೋಣ.