Wednesday, September 30, 2009

ಸಹಜವೇ ಅಸಹಜ


ಇವತ್ತು ದಿನಪತ್ರಿಕೆಯಲ್ಲಿ ಓದಿದ್ದು, "ಒಬ್ಬ ಅಟೊ ಡ್ರೈವರ್ ಒಬ್ಬ ಗಿರಾಕಿಗೆ ಅವರು ಬಿಟ್ಟು ಹೋಗಿದ್ದ ಲಾಪ್‍ಟಾಪ್‍ಅನ್ನು ಹಿಂತಿರುಗಿಸಿ ಕೊಟ್ಟ" ಎಂದು. ಆ ಡ್ರೈವರ್ ಮಾಡಿದ ಕೆಲಸ ಶ್ಲಾಘನೀಯ. ಆದರೂ ಪತ್ರಿಕೆಯ ಮುಖಪುಟದಲ್ಲಿ ಬರುವಷ್ಟು ದೊಡ್ಡ ವಿಷಯವೇ? ಹೌದು ಅದು ದೊಡ್ಡ ವಿಷಯ. ಯಾಕೆಂದರೆ ಈಗಿನ ಕಾಲದಲ್ಲಿ ಅಷ್ಟು ಕೂಡ ಯಾರು ಮಾಡುವುದಿಲ್ಲ. ಅಂದರೆ, ಯಾವುದು ಸಹಜವಾಗಿ ಆಗಬೇಕೋ ಅದು ಅಪರೂಪವಾಗಿದೆ ಎಂದೇ ಅರ್ಥವಲ್ಲವೇ? ಇಂತಹ ವಿಷಯಗಳನ್ನು ಪತ್ರಿಕೆಯಲ್ಲಿ ಓದಿ ಸಂತೋಷಪಡಬೇಕೋ ದುಃಖಪಡಬೇಕೋ ತಿಳಿಯುತ್ತಿಲ್ಲ.


ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಒಂದೇ ಸುದ್ದಿ. ಕಾಂಗ್ರೆಸ್ ಪಾರ್ಟಿಯ ರಾಜಕಾರಣಿಯರು ವಿಮಾನದಲ್ಲಿ ಎಕೊನೊಮಿ ಕ್ಲಾಸ್ನಲ್ಲೇ ಪ್ರಯಾಣ ಮಾಡುತ್ತಾರಂತೆ. ಅದರ ಉದ್ದೇಶ, ಪ್ರಜೆಗಳ ಹಣವನ್ನು ತಮ್ಮ ಸುಖಕ್ಕೋಸ್ಕರ ದುರುಪಯೋಗ ಆಗಬಾರದು ಎಂದು. ಅಂದರೆ ಇಷ್ಟು ವರ್ಷ ದುರುಪಯೋಗವಾಗುತ್ತಿತ್ತು ಅಂತೆಲ್ಲವೇ? ಹೋದ ವಾರ "ಬೆತ್ತಲೆ ಜಗತ್ತು" ಲೇಖನದಲ್ಲಿ ಪ್ರತಾಪ್ ಸಿಂಹ ಇದರ ಬಗ್ಗೆ ದೇರ್ಘವಾಗಿ ಬರೆದಿದ್ದಾರೆ.


ಅಭಿಶೇಕ್ ಭಚ್ಚನ್ ಮತ್ತು ಐಶ್ವರ್ಯ ಭಚ್ಚನ್ ಅಮಿತಾಬ್ ಮತ್ತು ಜಯ ಜೊತೇಗೇ ಇರ್ತಾರೆ. ಬೇರೆ ಮನೆ ಮಾಡುವುದಿಲ್ಲವಂತೆ. ಅದಕ್ಕೇನು? ಅವನಿಗೆ ನೊಬೆಲ್ ಪ್ರೈಜ಼್ ಕೊಡಬೇಕೇ? ತಂದೆ ತಾಯಿಯ ಜೊತೆ ಇರುವುದು ಅಷ್ಟು ಅಸಹಜವಾಗಿದೆಯೇ?


ಈ ರೀತಿಯ ಸುದ್ದಿಗಳು ಪತ್ರಿಕೆಯಲ್ಲಿ ಪದೇ ಪದೇ ನೋಡುತ್ತೇವೆ. ಅದು ಬಿಡಿ. ನಮ್ಮ ನಿತ್ಯ ಜೀವನದಲ್ಲಿ ಕೂಡ ಇದನ್ನು ನೋಡಬಹುದು. ಉದಾಹರಣೆಗೆ -


ಕೆಲವರಿಗೆ ಬೆಳಗ್ಗೆ ಬೇಗ ಏಳುವುದೇ ದೊಡ್ಡ ಸಾಹಸ ಮಾಡಿದಂತೆ. ದಿನಾ ಬೇಗ ಏಳುವವರು ಎಷ್ಟೋ ಜನ ಇದ್ದಾರೆ. ಆದರೆ ಅವರನ್ನು ಕಂಡರೆ, ಅದೇನು ಮಹಾ ಅವರು ಮೊದಲಿನಿಂದಲೂ ಬೇಗ ಎದ್ದು ಅಭ್ಯಾಸ. ಅದಕ್ಕೆ ಅವರಿಗೆ ಏನು ಕಷ್ಟ ಆಗಲ್ಲ. ನಿದಾನವಾಗಿ ೯ ಅಥವ ೧೦ ಗಂಟೆಗೆ ಏಳುವವನು ಅಪರೋಪವಾಗಿ ಒಂದು ದಿನ ಬೇಗ ಎದ್ದರೆ, ಅದೇ ದೊಡ್ಡ ಸುದ್ದಿ. ಅಕ್ಕಪಕ್ಕದಲ್ಲಿದ್ದವರಿಗೆ, ನೆಂಟರಿಗೆ ಸಂತೋಷದಿಂದ ಹೇಳ್ಕೋತಾರೆ "ರೀ ಇವತ್ತು ನನ್ನ ಮಗ ಬೆಳಗ್ಗೆ ೫ ಗಂಟೆಗೇ ಎದ್ದ ಗೊತ್ತಾ?".

ರೋಡಿನಲ್ಲಿ ಪ್ರಯಾಣಿಸುವಾಗ ಒಬ್ಬ ಆಕ್ಸಿಡೆಂಟ್ ಆಗಿ ಮೃತಪಡುತ್ತಾನೆ. ಅದನ್ನು ಕೇಳಿ, "ಅದೇನು ಮಹಾ. ದಿನಾ ಆಗ್ತಾನೆ ಇರತ್ತೆ ಮರಣಗಳು". ಪ್ರತೀ ದಿನ ಆಕ್ಸಿಡೆಂಟ್ ಆದರೂ, ಒಂದು ಮರಣವನ್ನು ಅಷ್ಟು ಸಾಧಾರಣಾವಾಗಿ ಕಾಣಬಹುದೇ?

ಹೀಗೇ, "ಆಯುಧಪೂಜೆಗೆ ಅವನ ಬೈಕನ್ನು ಅವನೇ ತೊಳೆದನಂತೆ", "ಆಫೀಸಿಗೆ ಊಟ ಮನೆಯಿಂದಲೇ ತೆಗೆದುಕೊಂಡು ಹೋಗ್ತಾನೆ. ಹೊರಗಡೆ ಹೋಟೆಲ್ನಲ್ಲಿ ತಿನ್ನಲ್ವಂತೆ", "ಅವನು ಕನ್ನಡದಲ್ಲೇ ಮಾತಾಡ್ತಾನೆ" .. ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. common sense is not common ಅನ್ನುವ ಹಾಗೆ, ಯಾವುದು ಸಹಜವಾಗಿ ನಡಿಯಬೇಕೋ, ಅದೇ ಅಪರೂಪದ ವಿಷಯಗಳು. ಇದೆಲ್ಲ ಮನುಷ್ಯ ಅಷ್ಟು ಸ್ವಾರ್ಥಿ ಆಗಿರುವುದಿಂದಲೋ, ಪಾಷ್ಚಾತ್ಯ ಸಂಸ್ಕೃತಿ ನಮ್ಮನ್ನು ಹೇಗೆ ಮಾಡಿದೆಯೋ ಅಥವಾ ನಮ್ಮ ನಿರ್ದಿಷ್ಟಮಾನವೇ ಇಳಿದಿದೆಯೋ ತಿಳಿಯುತ್ತಿಲ್ಲ.

Wednesday, September 16, 2009

ಮತ್ತೆ ಬಂದ ಗೋಪಿಯ ಕಂದ


ಮೊನ್ನೆ ಶನಿವಾರ ಕೃಷ್ಣ ಮತ್ತೆ ಮನೆಗೆ ಬಂದಿದ್ದ (ದಿನಾಗ್ಲು ಮನೇಲೇ ಇರ್ತಾನೆ. ಆದರೆ ಅವನು ಇದ್ದ ಗುರುತು ಮಾತ್ರ ವರುಷಕ್ಕೆ ಒಂದೇ ಸಲ). ಪುಟ್ಟ ಪುಟ್ಟ ಹೆಜ್ಜೆ ಹಾಕೊಂಡು, ಮಂಟಪದ ಮೇಲೆ ಏರಿ ಕೂತೇಬಿಟ್ಟ. ಕೃಷ್ಣ ಜನ್ಮಾಷ್ಟಮಿ ಬಂದರೆ ಸಾಕು ಏನೋ ಒಂತರಾ ಕುಶಿ. ಕೃಷ್ಣನಿಗೆ ಮಾಡುವ ತಿಂಡಿತಿನಿಸುಗಳು ಇನ್ಯಾರಿಗೂ ಮಾಡುವುದೇ ಇಲ್ಲ. ಅದೇನು ಮೋಡಿ ಮಾಡಿದಾನೋ ಅವನು. ಆದರೂ ಪರವಾಗಿಲ್ಲ. ಅವನ ಹೆಸರಿನಲ್ಲಿ ನಮಗೂ ತಿಂಡಿ ಸಿಗತ್ತೆ. ಅದೂ ಒಂದಾ ಎರಡಾ, ಚಕ್ಕುಲಿ, ಕೋಡ್ಬಳೆ, ನಿಪ್ಪಟ್ಟು, ಬರ್ಫಿಗಳು, ಉಂಡೆಗಳು ಅಂತ ಸುಮಾರು ೧೫-೨೦ ಬಗೆಬಗೆಯ ತಿಂಡಿಗಳು ಮಾಡ್ತೀವಿ ನಮ್ಮಲ್ಲಿ. ಹೊಟ್ಟೆ ಗತಿ ಏನು ಅಂತ ಮಾತ್ರ ಕೇಳಬೇಡಿ.

ಕುಶಿ ಪಡಲು ಮತ್ತೊಂದು ಕಾರಣ ಇದೆ. ಕೃಷ್ಣೆ ಬಂದಮೇಲೆ ಹರಿಶಿನ ಕುಂಕುಮ ನೆಪದಲ್ಲಿ ಗೋಪಿಕಾ ಸ್ತ್ರೀಯರೂ ಬರಬೇಕು ಅಲ್ವೇ? ಎಲ್ಲರೂ ಬಂದು ಕೃಷ್ಣನನ್ನು ನೋಡಿ ಹೋದರು. ಕೃಷ್ಣನ ಕೃಪೆಯಿಂದ ನಮಗೂ ಅವರ ದರ್ಶನದ ಭಾಗ್ಯ ಸಿಕ್ತು ;-)

ಕೃಷ್ಣನ ಕಾಲು ಗುರುತು ಹೀಗಿತ್ತು.


ಕೃಷ್ಣ ಮಂಟಪದಲ್ಲಿ ಹೀಗೆ ಕಾಣಿಸುತ್ತಿದ್ದ.


ಎಲ್ಲಾ ಸರಿ. ಆದ್ರೆ ಯಾಕೆ ಕೃಷ್ಣನಿಗೆ ಮಾತ್ರ ಈ ಸಡಗರ? ಪಾಪ ರಾಮ ಏನು ಪಾಪ ಮಾಡಿದ್ದ? ಕೃಶ್ಣಾನೋ ಒಬ್ಬ ಗೊಲ್ಲ. ಅವನಿಗೆ ಇಷ್ಟೊಂದು ತಿಂಡಿಗಳು, ಮಂಟಪ, ರಾತ್ರಿ ನಿದ್ದೆ ಕೆಟ್ಟು ಇವನಿಗೆ ಪೂಜೆ. ಆದ್ರೆ ರಾಮ ಒಬ್ಬ ರಾಜ. ಅವನಿಗೆ ಇನ್ನಷ್ಟು ಸಡಗರ ಆಗಿರಬೇಕಲ್ಲವೇ? ಊಹು, ಬರಿ ಒಂದಿಷ್ಟು ಕೋಸಂಬರಿ ಪಾನಕ.

ರಾಜನಾದರೂ ರಾಮ ಕಾಡಿಗೆ ಹೋಗಬೇಕಾಯಿತು. ಹೆಂಡತಿಯಿಂದ ದೂರ ಇರಬೇಕಾಯಿತು. ಕೃಷ್ಣ ರಾಜಾನೂ ಅಲ್ಲ, ಮಂತ್ರಿನೂ ಅಲ್ಲ. ಆದರೂ ಗೋಕುಲದಲ್ಲಿ ಅವನೇ ರಾಜನ ಹಾಗೆ ಇದ್ದ. ಮಥುರಾಗೆ ಬಂದಮೇಲೂ ಅಷ್ಟೇ. ಒಂದಲ್ಲ ಎರಡಲ್ಲ ೧೬೦೦೦ ಹೆಂಡತಿಯರು.

ಈಗ ನೀವೇ ಹೇಳಿ, ನೀವು ಸಿಂಹಾಸನದ ಮೇಲೆ ಕೂತು ರಾಮನ ಹಾಗೆ ಆಗಬೇಕೋ ಅಥವಾ ಒಬ್ಬ ಸಾಮಾನ್ಯ ಮನುಷ್ಯನಾಗಿ ಕೃಷ್ಣನ ಹಾಗೆ ಆಗಬೇಕೋ? ಈ ರಾಜಕಾರಿಣಿಗಳು ಯಾಕೆ ಪದವಿ ಪದವಿ ಅಂತ ಸಾಯ್ತಾರೋ. ರಾಮ ಕೃಷ್ಣರನ್ನ ನೋಡಿ ಕಲ್ತ್ಗೋಬಾರ್ದೇ.