Monday, February 1, 2010

ಯಾಮಿನಿ - ೨೦೧೦ (ಭಾಗ -೨)

ಗಾಯತ್ರಿಯವರ ವೀಣಾವಾದನ ಮುಗಿದಾಗ ಮಧ್ಯರಾತ್ರಿ ೧೨:೦೦ ದಾಟಿತ್ತು. ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಮಾಡಿಕೊಳ್ಳಲು ಸ್ವಲ್ಪ ಸಮಯ ವಿರಾಮ. ಮುಂದಿನ ಕಾರ್ಯಕ್ರಮ ಶ್ರೀಮತಿ ಶಾಂಭವಿ ವಾಝೆ ಅವರ ಕಥಕ್ ನೃತ್ಯವಾದ್ದರಿಂದ ವೇದಿಕೆ ಸಿದ್ದಪಡಿಸಲು ಸ್ವಲ್ಪ ಸಮಯ ಬೇಕಾಗಿತ್ತು. ಚಂದ್ರನೂ ನೆತ್ತಿಯ ಎತ್ತರಕ್ಕೆ ಬಂದಿದ್ದ. ನವೀನ ಆಗಲೇ ಸ್ವಪ್ನ ಲೋಕದಲ್ಲಿ ತೇಲಾಡುತ್ತಿದ್ದ. ಬೆಂಕಿಯ ಹೊಗೆ ಸ್ವಲ್ಪ ಹೆಚ್ಚೇ ಹರಡುತ್ತಿತ್ತು. ಆಗ ನನ್ನ ಕಾಮೆರಾ ಕಣ್ಣುಗಳು ಕಂಡದ್ದು ಎವು -


ನಾನೂ ಸ್ವಲ್ಪ ಹೊತ್ತು ಮಲಗಬೇಕೋ ಬೇಡವೋ ಎಂದು ಯೋಚಿಸುತ್ತಿರಬೇಕಾದರೆ ಮುರಳಿಯ ಗುರುಗಳು ಆಗಮಿಸಿದರು. ಅವರ ಜೊತೆ ಹರಟುತ್ತಿದ್ದಾಗ ನಿದ್ದೆಯು ಬಂದ ಹಾದಿಯನ್ನೇ ಹಿಡಿದು ಮರಳಿತು. ಒಂದು ಕಪ್ ಕಾಫೀ ಹೀರಿ, ಮತ್ತೆ ಸ್ವಸ್ಥಾನಕ್ಕೆ ಬಂದು ಕೂತೆ. ಅರ್ಧಕ್ಕರ್ಧ ಜನ ಎದ್ದು ಹೋಗಿದ್ದರು.

ನಾನು ಆಗಿನವರೆಗೂ ಯಾವುದೇ ಕಥಕ್ ನೃತ್ಯ ನೇರವಾಗಿ ನೋಡಿರಲಿಲ್ಲ. ಯಾಕೋ ಭರತನಾಟ್ಯಮ್‍ಗೆ ಇದ್ದ ಆಸಕ್ತಿ ಕಥಕ್ ನೃತ್ಯಕ್ಕೆ ಇರಲಿಲ್ಲ. ಆದರೂ ಬಂದ ಉದ್ದೇಶ ವ್ಯರ್ಥವಾಗಬಾರದೆಂದು ಕೂತು ನೋಡುತ್ತಿದ್ದೆ. ನೃತ್ಯ ಕಾರ್ಯಕ್ರಮ ಪ್ರಾರಂಭದಲ್ಲಿ ಕಲಾವಿದರ ಪರಿಚಯವಾಯಿತು. ಶಾಂಭವಿ ವಾಝೆಯವರು ಮೂಲತಃ ಪುಣೆಯವರಾಗಿದ್ದು, ಕಥಕ್‍ನಲ್ಲಿ ಪರಿಣಿತರಾಗಿ, ದೇಶ-ವಿದೇಶಗಳಲ್ಲಿ ಹಲವಾರು ನೃತ್ಯಕಾರ್ಯಕ್ರಮವನ್ನು ನೀಡಿದ್ದರು. ಅಷ್ಟಲ್ಲದೆ ಫ್ರೆಂಚ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ನಿಪುಣತೆ ಪಡೆದಿದ್ದರು. ಅವರ ಪರಿಚಯ ಕೇಳಿ ಕಿವಿ ಚುರುಕಾಯಿತು. ಅವರ ನೃತ್ಯ ಕಾರ್ಯಕ್ರಮ ನೋಡಲು ಆಸಕ್ತಿ ಹೆಚ್ಚಾಯಿತು.

ನೃತ್ಯವು ಗಣೇಶನ ಆರಾಧನೆಯಿಂದ ಪ್ರಾರಂಭವಾಯಿತು. ನಂತರ ಹಲವಾರು ತಾಳ ವಿನ್ಯಾಸಗಳು (ಇದಕ್ಕೆ ಕಥಕ್‍ನಲ್ಲಿ ಏನೆಂದು ಹೇಳುತ್ತರೆ ಎಂಬುದು ಗೊತ್ತಿಲ್ಲ) ಮತ್ತು ಅದರ ಅನುಗುಣವಾಗಿ ಪಾದಮೆಟ್ಟಲುಗಳೊಳಗೊಂಡ ನೃತ್ಯ. ಇದರ ವೈಶಿಷ್ಟ್ಯ ಅಂದರೆ, ಶಾಮ್ಭವಿ ವಾಝೆ ಅವರೇ ತಾಳ ಮಾದರಿಯನ್ನು ನಿರೂಪಿಸಿ, ನಂತರ ಅವರೇ ನೃತ್ಯವನ್ನು ಮಾಡುತ್ತಿದ್ದರು (ನೃತ್ಯಮಾಡುವಾಗ ನಿರೂಪಣೆಯ ಕೆಲಸ ಸಿ.ಡಿ. ಪ್ಲೇಯರ್ ಮಾಡುತ್ತಿತ್ತು). ನಂತರದ ನಾಟ್ಯ ವಸ್ತು/ವಿಷಯಕ್ಕೆ ಅನುಗುಣವಾದುದರಿಂದ ನನ್ನಂತಹ ಪಾಮರರಿಗೂ ಅರ್ಥವಾಯಿತು. ಯಶೋದೆ ಕೃಷ್ಣನನ್ನು ಮಲಗಿಸುವ ಪರಿ, ಕೃಷ್ಣ ಗೋವರ್ಧನ ಗಿರಿಯನ್ನು ಎತ್ತುವ ಪ್ರಸಂಗ, ಕೃಷ್ಣ ಗೋಪಿಯರ ಜೊತೆ ಹೋಲಿ ಆಡುತ್ತಿರುವ ಕ್ರಮ, ಎಲ್ಲದರ ಒಂದೊಂದು ಚಿತ್ರವೂ ಕಣ್ಣಮುಂದೆ ಹರಿದು ಹೋಯಿತು. ಕಥಕ್ ಇಷ್ಟು ಆಕರ್ಷಕವಾಗಬಹುದು ಎಂದು ತಿಳಿದದ್ದೇ ಆಗ. ವೃಂದನಾಟ್ಯದಲ್ಲಿ ಏಕಕಾಲಿಕ ಚಲನೆಗಳನ್ನು ನೋಡಿದಾಗ, ಹೇಗೆ ಅಭ್ಯಸ ಮಾಡುತ್ತಿದ್ದರೆಂದೇ ತಿಳಿಯಲಿಲ್ಲ. ನೃತ್ಯದ ಕೆಲವೊಂದು ಚಿತ್ರಗಳು -ನೃತ್ಯ ಮುಗಿಯುವಾಗ ಸುಮಾರು ೩:೦೦ ಗಂತೆ ಆಗಿತ್ತೇನೋ. ನಂತರ ಹಿಂದೂಸ್ತಾನಿ ಗಾಯನ ತಕ್ಷಣವೇ ಪ್ರಾರಂಭವಾಯಿತು, ಆನಂದ್ ಭಾಟೆಯವರ ನೇತೃತ್ವದಲ್ಲಿ. ಅವರ ಪರಿಚಯವಾದಾಗ, ಅವರು ಒಬ್ಬ ಸಾಫ್ಟ್ವೇರ್ ಇಂಜಿನೀರ್ ಎಂದು ತಿಳಿದು ಸಂತೋಷವೂ ಆಶ್ಚರ್ಯವೂ ಆಯಿತು. ಮೊದಲ ಗಾನದ ಆಲಾಪನೆ ಮುಗಿಯುವಷ್ಟರಲ್ಲೇ ನನಗೇ ತಿಳಿಯದೇ ಮಲಗಿಬಿಟ್ಟಿದ್ದೆ ;-) ಯಾಕೋ ಹಿಂದುಸ್ತಾನಿ ಸಂಗೀತಕ್ಕೂ ನನಗೂ ನಂಟು ಅಷ್ಟೇ ಅನ್ಸತ್ತೆ. ಸುಮಾರು ೫:೦೦ ಗಂಟೆಗೆ ಮುರಳಿ ಎಬ್ಬಿಸಿದ. ಆಗ ನನಗೆ ಕೇಳಿಸುತ್ತುದ್ದುದು ’ಭಾಗ್ಯಾದ ಲಕ್ಷ್ಮಿ ಬಾರಮ್ಮಾ’ ಹಾಡು, ’ನೋಡಿ ಸ್ವಾಮಿ ನಾವಿರೋದು ಹೀಗೆ’ ಚಿತ್ರದಲ್ಲಿ ಭೇಮ್ಸೇನ್ ಜೋಶಿ ಹಾಡಿದ್ರಲ್ಲಾ, ಆ ಶೈಲಿಯಲ್ಲಿ.ಮುಂಜಾವಿನ ಮಂಜಿನ ಪರಿಸರದಲ್ಲಿ ಕೂತು ಸಂಗೀತ ಕೇಳುವುದೂ ಒಂತರಾ ಮಧುರ ಯಾತನೆ. ಸಂಗೀತ ಮುಗಿದಮೇಲೆ ದ್ವಿಚಕ್ರವಾಹನದಲ್ಲಿ ೨೦ ಕಿಮಿ ಸಂಚರಿಸುವುದು ಬರೀ ಮರೆಯುವಂತಹ ಯಾತನೆ.
ಚಿತ್ರಗಳನ್ನು ತೆಗೆದಿದ್ದು ಸೋನಿ ಎಚ್-೫೦ ಕಾಮೆರಾದಿಂದ.
ತೆಗೆದವರು ನವೀನ, ಮುರಳಿ ಮತ್ತು ನಾನು. ಯಾವುದು ಯಾರು ತೆಗೆದದ್ದು ಎಂಬುದು ಜ್ಞಾಪಕವಿಲ್ಲ.

(ಮುಗಿಯಿತು)