Monday, August 31, 2009

ಚಾತುರ್ಮಾಸ

ಚಾತುರ್ಮಾಸ ಬಂದರೆ ಸಾಕು, ಹಬ್ಬ ಹರಿದಿನಗಳು ಶುರು, ಮುಹೂರ್ತಗಳು ಹೆಚ್ಚು, ಎಲ್ಲೆಲ್ಲೂ ಸಡಗರವೆ. ಅದಕ್ಕೆ ಜೋಡಿಸಿಕೊಂಡು, ನನಗೆ ಆಫೀಸಿನಲ್ಲಿ ಕೆಲಸವೂ ಹೆಚ್ಚು. ಇನ್ನು ಪಿತೃ ಪಕ್ಷ ಬಂದರೆ ಕೇಳುವುದೇ ಬೇಡ. ಇರುವವರನ್ನು ಬಿಟ್ಟು ಇಲ್ಲದಿರುವವರನ್ನು ನೆನೆಸುವುದೇ ಈ ಪಕ್ಷದ ಮಹಿಮೆ. ಅದು ಮಾಡಬಾರದು, ಇದು ಮಾಡಬಾರದು ಎಂಬ ನಿರ್ಬಂಧ ಬೇರೆ. ಪಕ್ಷದಲ್ಲಿ ಅಪ್ಪನಿಗೆ ದಿನವೂ ಫಲಹಾರ ಆಗಬೇಕು. ಒಂದೇ ವೇಳೆ ಊಟ. ಅದರಲ್ಲೂ ಕೆಲವೊಂದು ತರಕಾರಿಗಳು ಉಪಯೋಗಿಸುವಹಾಗಿಲ್ಲ. ಅಯ್ಯೋ ಯಾವಾಗಾದ್ರೂ ಮುಗಿಯತ್ತೋ ಈ ಪಕ್ಷ ಅಂತ ಅಮ್ಮ ಕಾಯ್ತಿರ್ತಾರೆ.


ಈ ಚಾತುರ್ಮಾಸದಲ್ಲಿ ನಮ್ಮ ಮಠದ ಸ್ವಾಮಿಗಳು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಮಠಗಳಲ್ಲಿ ಒಂದು ನಿಯಮ ಇದೆ. ಸನ್ಯಾಸಿಗಳು ಚಾತುರ್ಮಾಸದಲ್ಲಿ ಪ್ರಯಾಣ ಮಾಡಬಾರದು. ಚಾತುರ್ಮಾಸದ ೨ ತಿಂಗಳ ಅವಧಿಯಲ್ಲಿ ಒಂದೇ ಕಡೆಯಲ್ಲಿ ಇರಬೇಕು (ಚಾತುರ್ಮಾಸ ಅಂದ್ರೆ ೪ ತಿಂಗಳಲ್ವಾ ಅಂತ ಕೇಳಬೇಡಿ. ೪ ತಿಂಗಳು ಒಂದೇ ಕಡೆ ಇರಲು ಆಗದೆ ಇದ್ದಲ್ಲಿ, ೪ ಪಕ್ಷಗಳ ಕಾಲ ಚಾತುರ್ಮಾಸ ವ್ರತವನ್ನು ಅನುಷ್ಠಾನಗೊಳಿಸುತ್ತಾರೆ). ಸ್ವಾಮಿಗಳು ಇದಾರಲ್ಲ ಅಂತ ಆಗಾಗ ಮಠಕ್ಕೆ ಹೋಗಿಬರುತ್ತೇನೆ. ರಿಸಿಶನ್ ಟೈಮ್ ನೋಡಿ, ಇದನೆಲ್ಲ ಸ್ವಲ್ಪ ಹೆಚ್ಚು ಪಾಲಿಸಬೇಕು. ಸಂಕಟ ಬಂದಾಗ ವೆಂಕಟರಮಣ ಅಂತ ಕೇಳಿಲ್ವೇ?


ಸಾಮಾನ್ಯವಾಗಿ ತಿನ್ನುವ ವಿಚಾರದಲ್ಲಿ ನಾನು ಸ್ವಲ್ಪ choosy. ಕೆಲವೊಂದು ತರಕಾರಿಗಳನ್ನು ಬಿಟ್ಟರೆ ಬೇರೆ ಯಾವುದನ್ನು ಮುಟ್ಟುವುದಿಲ್ಲ. ತುಪ್ಪದಿಂದ ಮಾಡಿದ ಸಿಹಿ ಅಂದ್ರೆ ದೂರ ಓದ್ತೀನಿ. ಚಿಕ್ಕ ವಯಸ್ಸಿನಿಂದ ಅಭ್ಯಾಸವಾಗಿರುವುದರಿಂದ ಅಮ್ಮ ಮಾಡಿದ ಸಿಹಿಗಳು ಮಾತ್ರ ತಿಂತೀನಿ. ಆದ್ರೆ ಮಠಕ್ಕೆ ಹೋದಾಗೆಲ್ಲಾ ಅಲ್ಲೇ ಊಟ. ತುಪ್ಪ ಸೋರುತ್ತಿರುತ್ತದೆ. ಆದರೂ ಬೇಸರವಿಲ್ಲದೆ ಅಲ್ಲಿ ಮಾಡಿದ ಊಟ ಮಾತ್ರ ಹೊಟ್ಟೆ ಸೇರುತ್ತದೆ. ಹೇಗೆ ಅಂತ ನನಗೂ ತಿಳಿಯದ ವಿಷಯ. ಮೊನ್ನೆ ಮಠದಲ್ಲಿ ಊಟ ಹೀಗಿತ್ತು - ಅನ್ನ, ಸೌತೆಕಾಯಿ ಕೂಟು, ಸೀ ಕುಂಬಳಕಾಯಿ ಹುಳಿ, ಸುವರ್ಣಗೆಡ್ಡೆ ಪಲ್ಯ, ಮೆಣಸಿನ ಸಾರು, ಸಜ್ಜಪ್ಪ, ಮೊಸರು. ಇದರಲ್ಲಿ ಸಾಮಾನ್ಯವಾಗಿ ಮೆಣಸಿನ ಸಾರು, ಮೊಸರು ಬಿಟ್ಟರೆ ಯಾವುದೂ ಹಿಡಿಸುವುದಿಲ್ಲ. ಆದರೆ ಮಠದಲ್ಲಿ ಎಲ್ಲವೂ ರುಚಿಯೇ. ಎಲೆಯಲ್ಲಿ ಸ್ವಲ್ಪವೂ ಮಿಗಿಸದೆ, ತಿಂದಿದ್ದೆ. ಮಠದಲ್ಲಿ ತಿಳಿದವರು ಒಬ್ಬರು, ಸ್ವಲ್ಪ ಸಜ್ಜಪ್ಪವನ್ನು ಮನೆಗೂ ಪಾರ್ಸೆಲ್ ಮಾಡಿಕೊಟ್ಟರು. ಆದರೆ, ಮನೆಯಲ್ಲಿ ಅದು ಬೇಡವಾಗಿಹೋಯಿತು. ಏನು ವಿಚಿತ್ರ ಅಲ್ವ?


ಇನ್ನು ಈ ಸಲದ ಚಾತುರ್ಮಾಸ ನನಗೆ ಇನ್ನೂ ಸ್ಪೆಷಲ್. ಅಪ್ಪನಿಗೆ ೬೦ ವರುಷ ತುಂಬಿತು. ೨ ದಿನ ಆಫೀಸಿಗೆ ಚಕ್ಕರ್ ಹೊಡ್ದು, ಅಪ್ಪ ಅಮ್ಮನಿಗೆ ಮತ್ತೊಮ್ಮೆ ಮದುವೆ ಮಾಡಿಸಿಯಾಯಿತು. ಅವರ ಮೊದಲನೇ ಮದುವೆ ನಾನು ನೋಡಿರ್ಲಿಲ್ವಲ್ಲ ಅದಕ್ಕೆ ;-)


೪ ದಿನ ಆದ್ಮೇಲೆ ಆಫೀಸಿಗೆ ಬಂದಿದೀನಿ ಇವತ್ತು. ಪ್ರತೀ ಸೋಮವಾರ ಇರುವ ಮಂಡೆ ಬ್ಲೂಸ್ ಜೊತೆಗೆ, ೪ ದಿನಗಳಿಂದ ಬರದ ಕಾರಣದಿಂದ ಕೆಲಸದ ದಿನಚರಿಗೆ ಮನಸ್ಸು ಇನ್ನೂ ಒಗ್ಗಿಲ್ಲ. ಅದಕ್ಕೇ ಇದನ್ನ ಬರಿತಾ ಇದ್ದೀನಿ.

4 comments:

shivu.k said...

ರಾಜೀವ್ ಸರ್,

ಚಾತುರ್ಮಾಸ ಮತ್ತು ನಿಮ್ಮ ಮಠದ ವಿಚಾರ ವಿವರಿಸಿದ್ದೀರಿ. ನಾಲ್ಕು ದಿನದ ರಜದ ವಾತಾವರಣದಿಂದ ಹೊರಬಂದು ಬೇಗ ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳಿ...

ಬಾಲು said...

ರಾಜೀವ ಅವರೆ,

ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.

"ಇನ್ನು ಈ ಸಲದ ಚಾತುರ್ಮಾಸ ನನಗೆ ಇನ್ನೂ ಸ್ಪೆಷಲ್. ಅಪ್ಪನಿಗೆ ೬೦ ವರುಷ ತುಂಬಿತು. ೨ ದಿನ ಆಫೀಸಿಗೆ ಚಕ್ಕರ್ ಹೊಡ್ದು, ಅಪ್ಪ ಅಮ್ಮನಿಗೆ ಮತ್ತೊಮ್ಮೆ ಮದುವೆ ಮಾಡಿಸಿಯಾಯಿತು"

ಈಗ ಹೇಳಿ ನಿಮ್ಮ ಮದುವೆ ಯಾವಾಗ? ಒ೦ದು ಭರ್ಜರಿ ಭೂರಿ ಭೊಜನದ ಆಸೆ ಆಗಿದೆ. ಮೊದಲೆ ಸಿಹಿ ತಿ೦ಡೀ ಅ೦ದರೆ ನನಗೆ ಪ್ರಾಣ.
ನಿಮಗೆ ಬೇಗ ಮದುವೆ ಆಗಲಿ ಎ೦ದು ಹಾರೈಸುವೆ (ನನಗೆ ಊಟದ ಆಮ೦ತ್ರಣ ಸಿಗುತ್ತದೆ ಎ೦ದು!! :) )

Ittigecement said...

ರಾಜೀವ್...

ಅಪ್ಪ ಅಮ್ಮನ ಮದುವೆ ನಂತರದ ಸರದಿ ನಿಮ್ಮದು...

ಬಾಲು ಮಾತಿಗೆ ನಮ್ಮೆಲ್ಲರ ಸಪೋರ್ಟ್ ಇದೆ...

ಯಾವಾಗ ಸಿಹಿಯೂಟ...?

ಕೆಲವೊಮ್ಮೆ ಸಂಪ್ರದಾಯಗಳು "ಕಾಟಾಚಾರ" ಅನಿಸಿಬಿಡುತ್ತದೆ ಅಲ್ಲವಾ...?

ರಾಜೀವ said...

@ಶಿವು,
ಹೊಂದಿಕೊಂಡಾಯಿತು. ಬೇರೆ ದಾರಿ ಇಲ್ವೇ!!

@ಬಾಲು,
ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಬಂದಾಗ ನಿಮಗೆ ಖಂಡಿತ ಗೊತ್ತಾಗತ್ತೆ.
ನಿಮ್ಮ ಹಾರೈಕೆಗೆ ಧನ್ಯವಾದ.

@ಪ್ರಕಾಶ್,
ಬಾಲುಗೆ ಕೊಟ್ಟ ಉತ್ತರವೇ ನಿಮಗೂ.
ಕೆಲವೊಂದು ಸಂಪ್ರದಾಯಗಳು ಮಾಡುವಾಗ ಕಾಟಾಚಾರ ಅನ್ನಿಸಿದರೂ, ಅನಂತರ ಮಾಡಿದೆನೆಂಬ ಆತ್ಮತೃಪ್ತಿ ಇರುತ್ತದೆ ಅಲ್ಲವೇ?