ಮೊನ್ನೆ ಭಾನುವಾರ ಮನೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು. ಅದರ ಹಿಂದಿನ ದಿನ ನಾನು ತರಕಾರಿ ಮಾತು ಇನ್ನಿತರ ಸಾಮಾನು ತರಲು ಮಾರುಕಟ್ಟೆಗೆ ಹೋದೆ. ನಾಲ್ಕೈದು ಅಂಗಡಿಗಳಿಗೆ ಬೇಟಿ ಕೊಟ್ಟು ಚೌಕಾಸಿ ಮಾಡಿ ತರಕಾರಿ ಕೊಂಡಾಯಿತು. ಚೀಲವನ್ನು ಅಲ್ಲೇ ಒಂದು ಅಂಗಡಿಯಲ್ಲಿ ಇಟ್ಟು, ಅಡಿಕೆ ಪಟ್ಟೆಗಳನ್ನು (ಅಡಿಕೆ ಎಲೆಗಳಿಂದ ಮಾಡಿದ ತಟ್ಟೆ) ಕೊಂಡುಕೊಳ್ಳಲು ಹೋದೆ.
ಆ ಅಂಗಡಿಯಲ್ಲಿ ಇದ್ದಿದ್ದು ಒಬ್ಬಳು ಮಹಿಳೆ, ಸುಮಾರು ೨೫-೨೬ ವರ್ಷ ಇರಬಹುದೇನೋ. ಕೈಯಲ್ಲಿ ಸುಮಾರು ಒಂದು ವರುಷದ ಮಗು, ಕಾಲ ಬುಡದ ಹತ್ತಿರ ಮತ್ತೊಂದು ಮಗು, ಸುಮಾರು ೩ ವರುಷ ವಯಸ್ಸಿನ ಹುಡುಗಿ. ಅಂಗಡಿಯಲ್ಲಿ ಬೇರೆ ಯಾರು ಇರಲಿಲ್ಲ. ಅಂಗಡಿಯ ಜವಾಬ್ದಾರಿಯೆಲ್ಲವೂ ಆಕೆಗೇ. ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾಳೆ ಭೇಷ್ ಅನಿಸಿತು.
ಅಡಿಕೆ ಪಟ್ಟೆಗಳನ್ನು ನೋಡಿ, ಬೆಲೆ ವಿಚಾರಿಸಿ, ದೊಡ್ಡ ಗಾತ್ರದ ಪಟ್ಟೆಗಳನ್ನು ಕೊಂಡುಕೊಳ್ಳುವೆ, ೨೦೦ ಪಟ್ಟೆಗಳು ಬೇಕು ಎಂದೆ.
"ಬ್ಯಾಗ್ ಇದೆಯಾ ಅಣ್ಣ?" ಎಂದಳು.
"ಇಲ್ಲ ೨೦೦ ಪಟ್ತೆಗಳಿಗೆ ಬಾಗ್ ಸಾಕಾಗುವುದಿಲ್ಲ. ಒಂದು ಗೋಣಿಚೀಲದಲ್ಲಿ ಹಾಕಿ ಕೊಡು."
"ಸೆರಿ ಅಣ್ಣ."
"ಇಲ್ಲ ೨೦೦ ಪಟ್ತೆಗಳಿಗೆ ಬಾಗ್ ಸಾಕಾಗುವುದಿಲ್ಲ. ಒಂದು ಗೋಣಿಚೀಲದಲ್ಲಿ ಹಾಕಿ ಕೊಡು."
"ಸೆರಿ ಅಣ್ಣ."
ಪಟ್ಟೆಗಳು ಇಟ್ಟಿದ್ದ ಸ್ಥಳ ನನಗೆ ಕಾಣಿಸುತ್ತಿರಲಿಲ್ಲ. ಒಂದು ಪರದೆ ಅಡ್ಡ ಇತ್ತು. ಒಂದು ಪಟ್ಟೆಯ ಗಂಟನ್ನು ತೋರಿಸಿ, ಆ ತರಹದ ಪಟ್ಟೆಗಳನ್ನು ಹಾಕು ಎಂದು ಹೇಳಿದೆ. ಒಂದು ಗೋಣಿಚೀಲದಲ್ಲಿ ಹಾಕಿ ಚೀಲದ ಬಾಯನ್ನು ಕಟ್ಟುತ್ತಿದ್ದಾಗ -
"ಏನಮ್ಮ ಇದರಲ್ಲಿ ೨೦೦ ಪಟ್ಟೆಗಳು ಇದೆಯಾ?" ಎಂದು ಕೇಳಿದೆ.
"ಹು ಅಣ್ಣ. ನೀವೇ ಒಂದು ಸಲ ನೋಡ್ಬಿಡಿ ಬೇಕಿದ್ದರೆ."
"ಪರವಾಗಿಲ್ಲ ಬಿಡು. ನಿನ್ನನ್ನ ನಂಬ್ತೀನಿ."
ಎಲ್ಲವನ್ನೂ ಕೊಂಡು, ಚೀಲವನ್ನು ನನ್ನ ಬೈಕಿನ ಹಿಂಬಾಗಕ್ಕೆ ಕಟ್ಟಿ, ಮನೆಗೆ ಬಂದದ್ದೇ ಒಂದು ಸಾಹಸ. ಸ್ವಲ್ಪ ಹೊತ್ತು ನಂತರ, ಚೀಲವನ್ನು ಬಿಚ್ಚಿ ಅಡಿಕೆ ಪಟ್ಟೆಗಳನ್ನು ತೆಗೆದಾಗ, ನನಗೆ ಎಲ್ಲಿಲ್ಲದ ಕೋಪ. ದೊಡ್ಡ ಗಾತ್ರದ ೨೦೦ ಪಟ್ಟೆಗಳನ್ನು ಕೇಳಿದರೆ, ಅಲ್ಲಿ ಇದ್ದದ್ದು ೯೦ ದೊಡ್ಡ ಗಾತ್ರದ ಮತ್ತು ೭೫ ಸ್ವಲ್ಪ ಚಿಕ್ಕದಾದ ಪಟ್ಟೆಗಳು. ಈ ಲೋಕದಲ್ಲಿ ನಂಬಿಕೆಗೆ ಬೆಲೆಯೇ ಇಲ್ಲವೇ? ಸೆರಿ, ಇನ್ನೇನು ಮಾಡುವುದು, ನನ್ನ ಹಣೆಯಲ್ಲಿ ಇವತ್ತು ಮೋಸಹೊಗಬೇಕು ಎಂದು ಬರೆದಿದೆ ಅಷ್ಟೆ. ನಾನೇ ಎಣಿಸಿ ತರಬೇಕಿತ್ತು. ಸುಮ್ಮನಾಗಿಬಿಡೋಣ ಎಂದು ನಿಶ್ಚಯ ಮಾಡಿದ್ದೆ. ನಾಳೆ ಯಾವತ್ತಾದ್ರು, ನೀನು ಮೋಸ ಹೋಗಿ ಅದನ್ನು ಪ್ರಶ್ನಿಸಲಿಲ್ಲ ಎಂದು ವಿಷಾದ ಉಂಟಾದರೆ? ಅಂಗಡಿಗೆ ಹೋಗಿ ಒಂದು ಸಲ ಕೇಳಿಯೇ ಬಿಡೋಣ. ಅವಳು ಒಪ್ಪಿದರೆ ಸೆರಿ, ಇಲ್ಲದಿದ್ದರೆ ಅವಳಿಗೆ ಒಳ್ಳೆಯದನ್ನೇ ಹರಸಿ ಮರಲಿಬಿಡೋಣ ಎಂದು ಚಿಕ್ಕ ಗಾತ್ರದ ಪಟ್ಟೆಗಳನ್ನು ಒಂದು ಚೀಲದಲ್ಲಿ ಹಾಕಿ ಹೊರಟೇಬಿಟ್ಟೆ.
"ಏನಮ್ಮ, ನಾನು ಬೆಳಗ್ಗೆ ಬಂದು ೨೦೦ ಪಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದೆ. ಜ್ಞಾಪಕ ಇದಿಯಾ?"
"ಹು ಅಣ್ಣ."
"ನೀನು ಎಷ್ಟು ಕೊಟ್ಟೆ?""ಯಾಕಣ್ಣ, ಕಮ್ಮಿ ಇತ್ತಾ?"
ತಂದಿದ್ದ ಸಣ್ಣ ಗಾತ್ರದ ಪಟ್ಟೆಗಳನ್ನು ತೋರಿಸಿ, "ಈ ಸಿಜಿನದು ೭೫ ಕೊಟ್ಟಿದ್ದೀಯ. ನಾನು ಕೇಳಿದ ಗಾತ್ರದಲ್ಲಿ ೯೦ ಮನೇಲಿ ಇದೆ. ಹೀಗಾ ಮೋಸ ಮಾಡೋದು ನೀನು?"
"ಇಲ್ಲ ಅಣ್ಣ. ಗೊತ್ತಾಗ್ಲಿಲ್ಲ. ಮೋಸ ಮಾಡಿಲ್ಲಣ್ಣ. ಇನ್ನು ಎಷ್ಟು ಕೊಡಬೇಕು ಅಂತ ಹೇಳಿ, ಕೊಡ್ತೀನಿ."
"ಈ ಪಟ್ಟೆಗಳನ್ನು. ನೀನೆ ಇಟ್ಕೋ. ನನಗೆ ದೊಡ್ಡ ಪಟ್ಟೆಗಳೇ ಬೇಕು. ಇದು ನನಗೆ ಉಪಯೋಗ ಆಗೋಲ್ಲ. ಮನೇಲಿ ೯೦ ಇದೆ. ಇನ್ನು ೧೧೦ ಕೊಡಬೇಕು."
"ಆಯ್ತು ಅಣ್ಣ. ಪಕ್ಕದ ಅಂಗಡಿಯಿಂದ ತೊಗೊಂದ್ಬರ್ತೀನಿ. ನನ್ನ ಹತ್ರ ದೊಡ್ದಿಲ್ಲ."
"ಅದನ್ನ ಬೆಳಗ್ಗೆಯೇ ಹೇಳಬಹುದಿತ್ತಲ್ವಾ. ನಾನೇ ಪಕ್ಕದ ಅಂಗಡಿಯಿಂದ ತೊಗೊತಿದ್ದೆ."
"ಇದು ಚಿಕ್ಕದು ಅಂತ ಗೊತ್ತಾಗ್ಲಿಲ್ಲ ಅಣ್ಣ."
"ಸೆರಿ. ತೊಗೊಂಡ್ಬಾ. ಇನ್ನು ನೂರು ಕೊಡು ಸಾಕು. ೧೦ ಕಡಿಮೆ ಆದರೂ ಪರವಾಗಿಲ್ಲ."
ಪಕ್ಕದ ಅಂಗಡಿಯಿಂದ ತೊಗೊದ್ಬಂದು, "ನೀವೇ ಎಣ್ಸಿ ಅಣ್ಣ. ನನಗೆ ಅಷ್ಟೊಂದು ಎಣ್ಸಕ್ಕೆ ಬರೋಲ್ಲ."ನಾನೇ ಎಣ್ಸಿ ೧೦೦ ಪಟ್ಟೆಗಳನ್ನ ಮನೆಗೆ ತೊಗೊಂದ್ಬಂದೆ.
ಆಗ ನನಗೆ ಅನಿಸಿತು, ಈ ಲೋಕದಲ್ಲಿ ನಂಬಿಕೆಗೆ ಇನ್ನು ಬೆಲೆ ಇದೆ ಎಂದು. ಎಷ್ಟು ಸಣ್ಣ ವಿಷಯ ಅಲ್ವ ಇದು. ಪಾಪ ಅವಳಿಗೆ ಎಣಿಸುವುದು ಬರೋಲ್ಲ. ನಿಜವಾಗಲೂ ಮೋಸ ಮಾಡ್ಬೇಕು ಅಂತ ಇದ್ದಿದ್ದರೆ, ನನ್ನನ್ನ ನಂಬುವ ಅವಶ್ಯಕತೆಯೇ ಇರಲಿಲ್ಲ. ಅನಾವಶ್ಯಕವಾಗಿ, ಅವಳ ಬಗ್ಗೆ ತಪ್ಪು ತಿಳಿದಿದ್ದೆ. ಹೋಗಿ ವಿಚಾರಿಸಿದ್ದು ಒಳ್ಳೆಯದೇ ಆಯಿತು. ಹೀಗೇ ಜೀವನದಲ್ಲಿ ಪರಸ್ಪರ ನಂಬಿಕೆಯಿಲ್ಲದೆ, ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿಸಿ, ದ್ವೇಷ, ಅಸೂಯೆಗಳಿಗೆ ಎಲೆ ಹಾಕುವೆವು, ಆಲ್ವಾ?
ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೆರಳಿ
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ? ಮಂಕುತಿಮ್ಮಾ
ಶ್ರೀ ರಾಮ ಪಟ್ಟಾಭಿಷೇಕ ಸುಸೂತ್ರದಿಂದ ಮುಗಿಯುತ್ತಲೇ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಹರಡಿದೆ.
ಸರ್ವಂ ಶ್ರೀ ಕ್ರಿಶ್ಣಾರ್ಪಣಮಸ್ತು.
9 comments:
ರಾಜೀವ್,
ಯಾವುದೇ ತರಹದ ತಕರಾರು ಮಾಡದೇ ನಿಮಗೆ ನಿಮ್ಮ ಪಟ್ಟೆಗಳು ಸಿಕ್ಕಿದ್ದು ನಿಜಕ್ಕೂ ನಿಮ್ಮ ಅದೃಷ್ಟ. ಬದುಕಿನಲ್ಲಿ ನಂಬಿಕೆ ಅತಿಮುಖ್ಯ, ಆದರೆ ಇಂದಿನ ದಿನಗಳಲ್ಲಿ ನಂಬಿಕೆ ಮೂಡಿಸುವವರ ಸಂಖ್ಯೆ ಬಹಳ ಕಡಿಮೆ ಆಗಿದೆ. ನಾನು ಹೀಗೆ ಬೆಂಗಳೂರಿನ ಕೆಂಪೇಗೌಡ ವಾಹನ ನಿಲ್ದಾಣದಲ್ಲಿದ್ದ ಅಂಗಡಿಯಲ್ಲಿ ಒಂದು ಕೈಚೀಲ ಖರೀದಿಸಿದೆ, ಹತ್ತು ನಿಮಿಷದ ನಂತರ ನೋಡಿದರೆ ಆ ಕೈಚೀಲದ ಜಿಪ್(zip) ಸರಿಯಾರಿರಲಿಲ್ಲ. ಸಧ್ಯ ಇಗಲೇ ನೋಡಿದ್ದು ಒಳ್ಳೆಯದಾಯ್ತು ಎಂದು ಅಂಗಡಿಗೆ ಓಡಿದೆ, ಹತ್ತು ನಿಮಿಷದ ಹಿಂದೆ ಖರೀದಿಸಿದ ಕೈಚೀಲವನ್ನು ಈ ಅಂಗಡಿಯಲ್ಲಿ ಖರೀದಿಸಿಲ್ಲ ಎಂದು ಅಂಗಡಿಯವ ವಾದಮಾದತೊಡಗಿದ. ಅವನ ಹತ್ತಿರ ಜಗಳವಾಡಿ ಹೊಸ ಕೈ ಚೀಲ ಪಡೆಯುವಷ್ಟರಲ್ಲಿ ಸಾಕು ಸಾಕಾಗಿ ಹೋಯ್ತು.
ಇಂದು ಇನ್ನೋಬ್ಬನನ್ನು ಮೋಸ ಮಾಡಿ ಬದುಕುವುದು ಹೇಗೆ ಎನ್ನುವ ಯೋಚನೆಯಲ್ಲೇ ಜನ ಕಾಲಹರಣ ಮಾಡುತ್ತಿದ್ದರೆ.
ಬರುವಾಗ ಬೆಥ್ಥಲೇ ಹೋಗುವಾಗ ಬೆಥ್ಥಲೇ ಎನ್ನುವ ಸತ್ಯ ತಿಳಿದಿರಲಿ.
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್.
ನಿಮ್ಮ ಬ್ಲಾಗ್ಗೆ ಇದು ನನ್ನ ಮೊದಲ ಭೇಟಿ
ನಂಬಿಕೆ ಮುಖ್ಯ ಆದರೆ ನಮ್ಮ ಸುತ್ತಲಿನ ಕೆಲವರು
ಅದನ್ನು ಇಟ್ಟುಕೊಳ್ಳಲು ಬಯಸುತ್ತಿಲ್ಲವಲ್ಲ
ನಂಬಿಕೆ ಮೇಲೆ ಜೀವನ ಇದೆ ಸರ್, ನಡೆದರೆ ಭೂಮಿ ಕುಸಿಯಲ್ಲ ಅಂತ ನಂಬಿಕೆ, ಹೊರಗೆ ಬಿಸಿಲಿಗೆ ಸುಟ್ಟುಹೋಗಲ್ಲ ಅಂತ ನಂಬಿಕೆ, ನೀರು ವಿಷವಲ್ಲ ಅಂತ ನಂಬಿಕೆ, ಉಸಿರು ಹುಸಿಯಲ್ಲ ಅಂತ ನಂಬಿಕೆ... ಅದಕ್ಕೆ ಜೀವಂತ... ಭೂಮಿ ಕುಸಿಯಲೂಬಹುದು, ಬಿಸಿಲು ಸುಡಲೂ ಬಹುದು(UV rays ಹಾಗೆ ಏನೊ ಬಂದರೆ), ನೀರು ಏನೊ ಬೆರೆತು ವಿಷವಾಗಲೂ ಬಹುದು, ಉಸಿರುಗಟ್ಟಲೂಬಹುದು... ಆದರೆ ಹಾಗಾಗಲಿಕ್ಕಿಲ್ಲ ಅಂತ ನಂಬಿಕೆ...
ಆ ಹೆಣ್ಣು ಮಗಳೇನೊ ಮುಗ್ಧವಾಗಿದ್ದಕ್ಕೆ ಸರಿ ಹೋಯ್ತು ಸರ್, ಈಗೆಲ್ಲ ತಿರುಗಿ ಜಗಳಕ್ಕೆ ಬರುವವರೇ ಜಾಸ್ತಿ!
@ಶ್ರೀನಿ
ಜೀವನ ಪರ್ಯಂತ ಬರಿ ಲೆಕ್ಕಾಚಾರದಲ್ಲೇ ಕಳೆದುಬಿಟ್ಟರೆ, ಬದುಕುವುದು ಯಾವಾಗ? ಅದಕ್ಕೆ ಪರಸ್ಪರ ನಂಬಿಕೆ ಇರಬೇಕು ಅಂತ ನನ್ನ ಅನಿಸಿಕೆ. ಆದರೂ ಜಾಗರೂಕತೆಯಿಂದ ಸಾಗಬೇಕು. ಧನ್ಯವಾದಗಳು.
@ಉಮೇಶ್
ನಿಮಗೆ ಸ್ವಾಗತ. ನಿಜ ನೀವು ಹೇಳುವುದು. ಆದರೆ ಬೇರೆಯವರು ನಮ್ಮ ನಿಲುವಿನ ನಿರ್ಧಾರ ಮಾಡಬಾರದಲ್ಲವೇ? ನಮ್ಮ ತತ್ವಗಳು ನಮ್ಮಲ್ಲಿ ಸ್ಥಿರವಾಗಿ ನಿಲ್ಲಬೇಕು, ಫಲ ನಮ್ಮ ಕೈಯಲ್ಲಿಲ್ಲ. ಇದನ್ನು ಹೇಳುವುದು ಸುಲಭ, ಆದರೆ ಅನುಸರಿಸುವುದು ಕಠಿಣ. ಆದರೂ ಚಿಕ್ಕ ಚಿಕ್ಕ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಲ್ಲದಿದ್ದರೆ ಒಳ್ಳೆಯದು. ಹೀಗೇ ಬರುತ್ತಿರಿ.
@ಪ್ರಭು
ಆ ಹೆಣ್ಣು ಮಗಳು ಜಗಳಕ್ಕೆ ಇಳಿದಿದ್ದರೆ, ನಾನು ಸುಮ್ಮನೆ ಹಿಂದುರುಗುತ್ತಿದ್ದೆ ಅಷ್ಟೇ. ಮೋಸ ಮಾಡಿ ಸಂತೋಷ ಪಡೆಯುವುದು ಸಾಧ್ಯವೇ?
ಈ ತರದ ಅನುಭವಗಳು ನನಗು ಆಗಿವೆ, ನಮ್ಮ ಮನೆಯ ಹತ್ತಿರ ತರಕಾರಿ ಮಾರೋ ಹೆಂಗಸು ಕೂಡ ಅನಕ್ಷರಸ್ತೆ. ತಿಳಿಯದೆ ಜಾಸ್ತಿ ದುಡ್ಡು ಕೊಟ್ಟರೆ, ನನಪು ಇಟ್ಟುಕೊಂಡು ಮಾರನೇ ಕೊಟ್ಟಿದ್ದಿದೆ.
ಯಾರದ್ರು ನಂಬಿಕೆ ದ್ರೋಹ ಮಾಡಿದ್ರೆ ಖೇದ ಆಗುತ್ತೆ, ಆದರೆ ಯಾರನ್ನು ನಂಬದೆ ಬದುಕಿದ್ರೆ ಬದುಕು ಬರಡಾಗುತ್ತೆ ಅಲ್ವ...
ಲೇಖನ ಮತ್ತೆ ಶೀರ್ಷಿಕೆ ಚೆನ್ನಾಗಿದೆ.
ರಾಜೀವ್ ಸರ್,
ನಂಬಿಕೆ ಮೇಲೆ ಜೀವನ ನಡೆಯುತ್ತೆ ಅನ್ನುವುದಕ್ಕೆ ನಿಮ್ಮ ಅನುಭವವೇ ಸಾಕ್ಷಿ. ನನಗೂ ಇಂಥ ಅನೇಕ ಅನುಭವಗಳಾಗಿವೆ. ನಾವು ಕೆಲವೊಮ್ಮೆ ಸುಮ್ಮನೆ ಆತುರ ಬಿದ್ದು ಬೇರೆಯವರ ಮೇಲೆ ಏನೇನೋ ಅಂದುಕೊಂಡುಬಿಡ್ತೀವಲ್ವಾ....
ಬಾಲು:
ಖೇದ ಯಾಕ್ರೀ? ಅವರವರು ಮಾಡಿದ್ದು ಅವರವರು ಅನುಭವಿಸುತ್ತಾರೆ.
ಶಿವು ಸರ್:
ಹೌದು
ರಾಜೀವ
ಮನತಟ್ಟುವ ಅನುಭವ..
"ನಂಬಿ ಕೆಟ್ಟವರಿಲ್ಲವೋ ಅಂತ ನಮ್ಮ ದಾಸ ಶ್ರೇಷ್ಠರು ಹೇಳಿದ್ದು..."
ರಾಮ, ದೇವರು.. ಅಣ್ಣ, ಗೆಳೆಯ... ಎಲ್ಲ ಸಂಬಂಧಗಳು..
ನಂಬಿಕೆ.... ನಂಬಿಕೆಯೇ ದೇವರು.....
ಚಂದದ ಲೇಖನ ..
ಆರೋಗ್ಯ ಸರಿ ಇಲ್ಲದ ಕಾರಣ ತಡವಾಗಿ ಓದ ಬೇಕಾಯಿತು...
ಅಭಿನಂದನೆಗಳು....
ಹೆಗಡೆಯವರೆ,
ಪ್ರತಿಕ್ರಿಯೆಗೆ ನನ್ನಿ. ಈಗ ಆರೋಗ್ಯ ಹೇಗಿದೆ?
Post a Comment