Wednesday, September 30, 2009

ಸಹಜವೇ ಅಸಹಜ


ಇವತ್ತು ದಿನಪತ್ರಿಕೆಯಲ್ಲಿ ಓದಿದ್ದು, "ಒಬ್ಬ ಅಟೊ ಡ್ರೈವರ್ ಒಬ್ಬ ಗಿರಾಕಿಗೆ ಅವರು ಬಿಟ್ಟು ಹೋಗಿದ್ದ ಲಾಪ್‍ಟಾಪ್‍ಅನ್ನು ಹಿಂತಿರುಗಿಸಿ ಕೊಟ್ಟ" ಎಂದು. ಆ ಡ್ರೈವರ್ ಮಾಡಿದ ಕೆಲಸ ಶ್ಲಾಘನೀಯ. ಆದರೂ ಪತ್ರಿಕೆಯ ಮುಖಪುಟದಲ್ಲಿ ಬರುವಷ್ಟು ದೊಡ್ಡ ವಿಷಯವೇ? ಹೌದು ಅದು ದೊಡ್ಡ ವಿಷಯ. ಯಾಕೆಂದರೆ ಈಗಿನ ಕಾಲದಲ್ಲಿ ಅಷ್ಟು ಕೂಡ ಯಾರು ಮಾಡುವುದಿಲ್ಲ. ಅಂದರೆ, ಯಾವುದು ಸಹಜವಾಗಿ ಆಗಬೇಕೋ ಅದು ಅಪರೂಪವಾಗಿದೆ ಎಂದೇ ಅರ್ಥವಲ್ಲವೇ? ಇಂತಹ ವಿಷಯಗಳನ್ನು ಪತ್ರಿಕೆಯಲ್ಲಿ ಓದಿ ಸಂತೋಷಪಡಬೇಕೋ ದುಃಖಪಡಬೇಕೋ ತಿಳಿಯುತ್ತಿಲ್ಲ.


ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಒಂದೇ ಸುದ್ದಿ. ಕಾಂಗ್ರೆಸ್ ಪಾರ್ಟಿಯ ರಾಜಕಾರಣಿಯರು ವಿಮಾನದಲ್ಲಿ ಎಕೊನೊಮಿ ಕ್ಲಾಸ್ನಲ್ಲೇ ಪ್ರಯಾಣ ಮಾಡುತ್ತಾರಂತೆ. ಅದರ ಉದ್ದೇಶ, ಪ್ರಜೆಗಳ ಹಣವನ್ನು ತಮ್ಮ ಸುಖಕ್ಕೋಸ್ಕರ ದುರುಪಯೋಗ ಆಗಬಾರದು ಎಂದು. ಅಂದರೆ ಇಷ್ಟು ವರ್ಷ ದುರುಪಯೋಗವಾಗುತ್ತಿತ್ತು ಅಂತೆಲ್ಲವೇ? ಹೋದ ವಾರ "ಬೆತ್ತಲೆ ಜಗತ್ತು" ಲೇಖನದಲ್ಲಿ ಪ್ರತಾಪ್ ಸಿಂಹ ಇದರ ಬಗ್ಗೆ ದೇರ್ಘವಾಗಿ ಬರೆದಿದ್ದಾರೆ.


ಅಭಿಶೇಕ್ ಭಚ್ಚನ್ ಮತ್ತು ಐಶ್ವರ್ಯ ಭಚ್ಚನ್ ಅಮಿತಾಬ್ ಮತ್ತು ಜಯ ಜೊತೇಗೇ ಇರ್ತಾರೆ. ಬೇರೆ ಮನೆ ಮಾಡುವುದಿಲ್ಲವಂತೆ. ಅದಕ್ಕೇನು? ಅವನಿಗೆ ನೊಬೆಲ್ ಪ್ರೈಜ಼್ ಕೊಡಬೇಕೇ? ತಂದೆ ತಾಯಿಯ ಜೊತೆ ಇರುವುದು ಅಷ್ಟು ಅಸಹಜವಾಗಿದೆಯೇ?


ಈ ರೀತಿಯ ಸುದ್ದಿಗಳು ಪತ್ರಿಕೆಯಲ್ಲಿ ಪದೇ ಪದೇ ನೋಡುತ್ತೇವೆ. ಅದು ಬಿಡಿ. ನಮ್ಮ ನಿತ್ಯ ಜೀವನದಲ್ಲಿ ಕೂಡ ಇದನ್ನು ನೋಡಬಹುದು. ಉದಾಹರಣೆಗೆ -


ಕೆಲವರಿಗೆ ಬೆಳಗ್ಗೆ ಬೇಗ ಏಳುವುದೇ ದೊಡ್ಡ ಸಾಹಸ ಮಾಡಿದಂತೆ. ದಿನಾ ಬೇಗ ಏಳುವವರು ಎಷ್ಟೋ ಜನ ಇದ್ದಾರೆ. ಆದರೆ ಅವರನ್ನು ಕಂಡರೆ, ಅದೇನು ಮಹಾ ಅವರು ಮೊದಲಿನಿಂದಲೂ ಬೇಗ ಎದ್ದು ಅಭ್ಯಾಸ. ಅದಕ್ಕೆ ಅವರಿಗೆ ಏನು ಕಷ್ಟ ಆಗಲ್ಲ. ನಿದಾನವಾಗಿ ೯ ಅಥವ ೧೦ ಗಂಟೆಗೆ ಏಳುವವನು ಅಪರೋಪವಾಗಿ ಒಂದು ದಿನ ಬೇಗ ಎದ್ದರೆ, ಅದೇ ದೊಡ್ಡ ಸುದ್ದಿ. ಅಕ್ಕಪಕ್ಕದಲ್ಲಿದ್ದವರಿಗೆ, ನೆಂಟರಿಗೆ ಸಂತೋಷದಿಂದ ಹೇಳ್ಕೋತಾರೆ "ರೀ ಇವತ್ತು ನನ್ನ ಮಗ ಬೆಳಗ್ಗೆ ೫ ಗಂಟೆಗೇ ಎದ್ದ ಗೊತ್ತಾ?".

ರೋಡಿನಲ್ಲಿ ಪ್ರಯಾಣಿಸುವಾಗ ಒಬ್ಬ ಆಕ್ಸಿಡೆಂಟ್ ಆಗಿ ಮೃತಪಡುತ್ತಾನೆ. ಅದನ್ನು ಕೇಳಿ, "ಅದೇನು ಮಹಾ. ದಿನಾ ಆಗ್ತಾನೆ ಇರತ್ತೆ ಮರಣಗಳು". ಪ್ರತೀ ದಿನ ಆಕ್ಸಿಡೆಂಟ್ ಆದರೂ, ಒಂದು ಮರಣವನ್ನು ಅಷ್ಟು ಸಾಧಾರಣಾವಾಗಿ ಕಾಣಬಹುದೇ?

ಹೀಗೇ, "ಆಯುಧಪೂಜೆಗೆ ಅವನ ಬೈಕನ್ನು ಅವನೇ ತೊಳೆದನಂತೆ", "ಆಫೀಸಿಗೆ ಊಟ ಮನೆಯಿಂದಲೇ ತೆಗೆದುಕೊಂಡು ಹೋಗ್ತಾನೆ. ಹೊರಗಡೆ ಹೋಟೆಲ್ನಲ್ಲಿ ತಿನ್ನಲ್ವಂತೆ", "ಅವನು ಕನ್ನಡದಲ್ಲೇ ಮಾತಾಡ್ತಾನೆ" .. ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. common sense is not common ಅನ್ನುವ ಹಾಗೆ, ಯಾವುದು ಸಹಜವಾಗಿ ನಡಿಯಬೇಕೋ, ಅದೇ ಅಪರೂಪದ ವಿಷಯಗಳು. ಇದೆಲ್ಲ ಮನುಷ್ಯ ಅಷ್ಟು ಸ್ವಾರ್ಥಿ ಆಗಿರುವುದಿಂದಲೋ, ಪಾಷ್ಚಾತ್ಯ ಸಂಸ್ಕೃತಿ ನಮ್ಮನ್ನು ಹೇಗೆ ಮಾಡಿದೆಯೋ ಅಥವಾ ನಮ್ಮ ನಿರ್ದಿಷ್ಟಮಾನವೇ ಇಳಿದಿದೆಯೋ ತಿಳಿಯುತ್ತಿಲ್ಲ.

12 comments:

shivu.k said...

ರಾಜೀವ್,

ಸಹಜತೆ ಕುರಿತು ಒಂದು ಒಳ್ಳೆ ಅವಲೋಕನ ಮಾಡಿದ್ದೀರಿ. ದೊಡ್ಡವರು, ದೊಡ್ಡವರ ಮಕ್ಕಳು, ಮಾಡಿದ ಸಣ್ಣ ಸಾಧನೆಗಳು ದಿನಪತ್ರಿಕೆಗಳಲ್ಲಿ ಪ್ರಚಾರ ಗಿಟ್ಟಿಸುತ್ತವೆ. ತರಕಾರಿ, ಹಾಲು, ದಿನಪತ್ರಿಕೆಯವರು ನಾಲ್ಕುಗಂಟೆ ಎದ್ದೇಳುವುದಿಲ್ಲವೇ. ಅವರು ಪ್ರಚಾರಕ್ಕಾಗಿ ಮಾಡುತ್ತಾರಾ...

Ittigecement said...

ರಾಜೀವ...

ಇಂದಿನ ಸಮಾಜಕ್ಕೆ ಕನ್ನಡಿ ಹಿಡಿದ್ದೀರಿ...
ಎಲ್ಲೋ ಒಂದು ಕಡೆ ನಾವು ಸಹಜತೆಯನ್ನು ಕಳೆದು ಕೊಳ್ಳುತ್ತಿದ್ದೇವೆ..
ನಾಗರಿಕತೆಯ ಹೆಸರಿನಲ್ಲಿ...

ಪ್ರಾಮಾಣಿಕತೆ ಸಹಜವಾಗಿ ನಮ್ಮಲ್ಲಿದ್ದರೆ...
ಆಗ ಅದು ಸುದ್ಧಿಯೇ ಆಗುವದಿಲ್ಲ...

ಬಹಳ ಸೊಗಸಾಗಿ ವಿಶ್ಲೇಷಿಸಿದ್ದೀರಿ...
ನಾವೆಲ್ಲರೂ ನೀವು ಹೇಳಿದ ಒಂದಲ್ಲ, ಒಂದು ಮಾತು ಆಡಿರ್ತೀವಿ.
ನಮ್ಮನ್ನೆಲ್ಲ ಚಿಂತನೆಗೆ ಹಚ್ಚಿದ್ದೀರಿ...

ಅಭಿನಂದನೆಗಳು..

AntharangadaMaathugalu said...

ಎಲ್ಲೆಲ್ಲೂ ಬರಿಯ ಅನುಕರಣೆಯೇ ಕಾಣುತ್ತಿರುವುದರಿಂದ, ಸಹಜತೆ ಕಳೆದು ಹೋಗಿದೆ ಅನ್ನಿಸುತ್ತಿದೆ...ದೊಡ್ಡವರು, ಅವರ ಮಕ್ಕಳು ಎಲ್ಲವನ್ನೂ ಪ್ರಚಾರಕ್ಕಾಗಿಯೇ ಮಾಡುತ್ತಾರೆ, ಆದರೆ ಅದೇ ಸಾಧನೆಗಳು ನಮಗೆ ಜೀವನವೇ ಆಗಿರುತ್ತದೆ.... ಬರಹ ಚೆನ್ನಾಗಿದೆ... ಓದಿದವರನ್ನೆಲ್ಲಾ ಚಿಂತಿಸುವಂತೆ ಮಾಡುತ್ತದೆ.

ಶ್ಯಾಮಲ

Srinivas Girigowda said...

ಪ್ರಿಯ ರಾಜೀವ್,

ಲೇಖನ ಚಿಕ್ಕ ಹಾಗೂ ಚೊಕ್ಕವಾಗಿ ಮನ ಮುಟ್ಟುವ ರೀತಿ ಮೂಡಿಬಂದಿದೆ. "ಸಹಜವೇ ಅಸಹಜ" ಇಂದಿನ ಜೀವನದ, ಜನರ ಜೀವನ ಶೈಲಿಯ ಕನ್ನಡಿಯಂತಿದೆ. ಮನುಷ್ಯ ತಂತ್ರಜ್ಞಾನ ಆವಿಷ್ಕಾರ ಅನ್ನುತ್ತ ಮುಂದೆ ಸಾಗುತ್ತಿದ್ದರೆ ಹಲಾವರು ವಿಷಯಗಳಲ್ಲಿ ನಮ್ಮ ಪೂರ್ವಜರಿಗಿಂಥ ಹಿಂದೆ ಉಳಿದಿದ್ದಾನೆ. "World is moving to Mediocrity" ಅನ್ನುವ ಹಾಗೆ ಸಣ್ಣ ಸಣ್ಣ ವಿಷಯಗಳಲ್ಲೇ ತನ್ನ ಪೌರುಷ ತೋರಿಸಿ, ಹಿಂದೆ ತೀರ ಸಹಜವಾಗಿದ್ದನ್ನು ಈಗ ಅಸಹಜ ಅದನ್ನು ಒಂದು ಸಾದನೆ ಎನ್ನುವಂತೆ ಮಾಡಿದ್ದಾನೆ. ಈಗಲೇ ಜನ "ಏ ಅವನು ಮನೆ ಇಂದ ಕಚೇರಿಗೆ ಕಾಲ್ನಡಿಗೆಯಲ್ಲೇ ಹೋಗ್ಥನಂಥೆ", "ಏ ಅವನು ಸಾಫ್ಟ್ವೇರ್ ಇಂಜಿನಿಯರ್ ಬಟ್ ಮನೆಗೆ 6 PM ಗೆ ಬರ್ಥನಂಥೆ", "ಅವ್ರು ನೋಡ್ರಿ ಯಾವತ್ಹು ಟಿಕೆಟ್ ಇಲ್ದೆ ಪ್ರಯಾಣ ಮಾಡೋದೇ ಇಲ್ವಂತೆ" ಅಂತ ಮಾತಾಡ್ತಾರೆ.

ಗಾಂಧಿ ಜಯಂತಿಯಾ ಈ ದಿನ ಅವರು ಹೇಳಿದ ಹಾಗೆ "You must be the change you wish to see in the world". ನಮ್ಮನ್ನು ನಾವು ತಿದ್ದಿಕೊಳ್ಳೋಣ.

ಸರ್ವೇ ಜನಃ ಸುಖಿನೋ ಭವಂತು.....
- ಶ್ರೀನಿವಾಸ್

Unknown said...

ರಾಜೀವರೆ ,
ಉತ್ತಮ ಲೇಖನ , ಚೆನ್ನಾಗಿದೆ.
೬ ಕೊಟ್ಟರೆ ಅತ್ತೆ ಕಡೆಗೆ ,೩ ಕೊಟ್ಟರೆ ಸೊಸೆ ಕಡೆಗೆ ಅನ್ನೋ ಹಗೆ ಆಗಿಬಿಟ್ಟಿವೆ ಈ ಮಾಧ್ಯಮಗಳು

ಇಂತಿ
ವಿನಯ

ಬಾಲು said...

ಹೌದು, ಸರಿಯಾಗಿ ಹೇಳಿದ್ದಿರಿ. ಮು೦ದೊ೦ದು ದಿನ ಒಬ್ಬ ಹುಡುಗ ಹುಡುಗಿನ ಮದುವೆ ಆದ್ರೆ ಅದು ದೊಡ್ಡ ಸುದ್ದಿ ಆಗಬಹುದೇನೊ...

ರಾಜೀವ said...

@ಶಿವು,
ಹೌದು. ಕೆಲವರಿಗೆ ಹೊಟ್ಟೆಪಾಡು. ಇನ್ನು ಕೆಲವರಿಗೆ ಅಪರೂಪದ, ಪ್ರಚಾರಕ್ಕಾಗಿ ಬಳಸಬಹುದಾದ ಕ್ರಿಯೆ.
ಪ್ರತಿಕ್ರಿಯೆಗೆ ಧನ್ಯವಾದಗಳು.

@ಸಿಮೆಂಟು ಮರಳು ಪ್ರಕಾಶ್,
ಎಲ್ಲೋ ಒಂದು ಕಡೆ ಅಲ್ಲ. ಎಲ್ಲಾ ಕಡೆಯಿಂದಲೂ ಸಹಜತೆಯನ್ನು ಕಳೆದುಕೊಂಡಿದ್ದೀವಿ ಅಲ್ವಾ?
ನಮ್ಮ ಮಾಧ್ಯಮದವರು ಬೇಡದ ವಿಷಯಗಳಿಗೆ ಅನವಶ್ಯಕ ಜನಪ್ರಿಯತೆ ಕೊಡುತ್ತಿದ್ದಾರೆ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

@ಶ್ಯಾಮಲ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ. ನನಗೂ ಕೆಲವೊಂದು ವಿಷಯಗಳು ಚಿಂತಿಸುವಂತೆ ಮಾಡಿತು. ಅದರ ಪರಿಣಾಮವೇ ಈ ಬರಹ.
ಹೀಗೇ ಬರುತ್ತಿರಿ. ಧನ್ಯವಾದ.

@ಶ್ರೀನಿ,
ನಿನ್ನ ಪ್ರತಿಕ್ರಿಯೆ ಓದಲು ತುಂಬಾ ಸಂತೋಶವಾಗುತ್ತದೆ. ನನಗೆ ಇನ್ನೂ ಬರೆಯಲು ಉತ್ಸಾಹ ಬರುತ್ತದೆ.
ಹೌದು, ಇತಿಹಾಸದಿಂದ ನಾವು ಏನನ್ನೂ ತಿಳಿದುಕೊಂಡಂತಿಲ್ಲ. ನಮ್ಮ ಸ್ವಾರ್ಥವೇ ನಮ್ಮನ್ನು ನುಂಗಿಬಿಟ್ತಿದೆ.
ನಾನು ಕೂಡ ಎಷ್ಟೋ ಸಲ ಚಿಕ್ಕ ಚಿಕ್ಕ ವಿಷಯಗಳಿಗೆ ಹೆಮ್ಮೆ ಪಟ್ಟು, ಏನೋ ಸಾಧಿಸಿದಂತೆ ಹೇಳಿಕೊಳ್ಳುತ್ತೇನೆ.
ಬದಲಾವಣೆ ನನ್ನಿಂದಲೇ ಪ್ರಾರಂಭವಾಗಲಿ ಎಂಬ ಆಶಯ. ಅದರ ದಾರಿಯಲ್ಲೇ ಮುನ್ನುಗ್ಗುವ ಪ್ರಯತ್ನ.

@ವಿನಯ್,
ನನ್ನ ಬ್ಲಾಗಿಗೆ ಸ್ವಾಗತ.
ಮಾಧ್ಯಮದವರಿಗೆ ಅವರ ಟಿಆರ‍್ಪಿ ಬಗ್ಗೆ ಕಾಳಜಿ. ಇದರ ಬಗ್ಗೆಯೆಲ್ಲ ಯೋಚಿಸುವುದು ಕಡಿಮೆ.
ನಿಮ್ಮ ಬರಹಗಳನ್ನು ಆಗಾಗ ಸಂಪದದಲ್ಲಿ ನೋಡಿದ್ದೆ. ನೀವು ಮತ್ತು ಚೇತು ಜಗಳವಾಡುತ್ತಿದ್ದುದನ್ನು ಈಗಲೂ ನೆನಸಿಕೊಳ್ಳುತ್ತೇನೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

@ಬಾಲು,
ಹೌದು ಹೌದು. ಹೋಗ್ತಾ ಹೋತಾ ಇನ್ನು ಎನೇನು ನೋಡ್ಬೇಕೋ, ಕೇಳ್ಬೇಕೋ.

Prabhuraj Moogi said...

ಮೊದಲು ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಾಗುತ್ತಿತ್ತು, ಈಗ ಅದು ಸಹಜ ಆಗಿ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿಯಾಗುತ್ತದೆ ಅಂತ ಎಲ್ಲೊ ಓದಿದ್ದ ನೆನಪು.
ಮುಂದೊಂದು ದಿನ ನಾಯಿ ನಾಯಿಗೆ ಕಚ್ಚಿದರೂ ಕೂಡ ಸುದ್ದಿಯಾದೀತೇನೊ!
ಸಹಜತೆ ಅನ್ನೊದು ಕಾಲ ಕಾಲಕ್ಕೆ ಬದಲಾಗುತ್ತಿದೆ, ಹಾಗಾಗಿಯೇ ಈ ಅಸಹಜ ಉದ್ಗಾರಗಳು ಹೊರಡುತ್ತಿವೆ.

sunaath said...

ರಾಜೀವ,
ತುಂಬ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಲೇಖನ ನಮ್ಮ ಸಮಾಜವೇ ಎಷ್ಟು ಅಸಹಜವಾಗಿದೆ ಎನ್ನುವದನ್ನು ಚೆನ್ನಾಗಿ ತೋರಿಸುತ್ತಿದೆ.

ರಾಜೀವ said...

@ಪ್ರಭು,
ನಾಯಿಗಳ ಬಗ್ಗೆ ನನಗೆ ತಿಳಿಯದು. ಅದರಿಂದ ಕಚ್ಚಿಸಿಕೊಂಡೂ ಇಲ್ಲ, ನಾನೂ ಅದಕ್ಕೆ ಕಚ್ಚಲು ಪ್ರಯತ್ನಿಸಿಲ್ಲ ;-) (ತಮಾಶೆಗೆ)

@ಸುನಾಥ್ ಅವರೇ,
ಪ್ರತಿಕ್ರಿಯಗೆ ಧನ್ಯವಾದಗಳು. ಈಗ ಪ್ರಕೃತಿಯೂ ಅಸಹಜವಾಗಿ ವರ್ತಿಸುತ್ತಿದೆ.

ದಿನಕರ ಮೊಗೇರ said...

ಸಹಜತೆಯೇ ಇರದೇ ಹೋದರೆ, ಅಸಜತೆಯೇ ಸಹಜವಾಗಿ ಹೋಗುತ್ತದೆ.... ತುಂಬಾ ಅರ್ಥಪೂರ್ಣವಾಗಿತ್ತು....

ರಾಜೀವ said...

@ದಿನಕರ,
ನನ್ನ ಬ್ಲಾಗಿಗೆ ಸ್ವಾಗತ. ಸಹಜತೆಯ ಜೊತೆ ನಮ್ಮತನವನ್ನೂ ಕಳೆದುಕೊಳ್ಳುತ್ತಿದ್ದೇವೆ ಅಲ್ವೇ?

ಪ್ರತಿಕ್ರಿಯೆಗೆ ಧನ್ಯವಾದಗಳು.