
ಮೊನ್ನೆ ಭಾನುವಾರ ಮನೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು. ಅದರ ಹಿಂದಿನ ದಿನ ನಾನು ತರಕಾರಿ ಮಾತು ಇನ್ನಿತರ ಸಾಮಾನು ತರಲು ಮಾರುಕಟ್ಟೆಗೆ ಹೋದೆ. ನಾಲ್ಕೈದು ಅಂಗಡಿಗಳಿಗೆ ಬೇಟಿ ಕೊಟ್ಟು ಚೌಕಾಸಿ ಮಾಡಿ ತರಕಾರಿ ಕೊಂಡಾಯಿತು. ಚೀಲವನ್ನು ಅಲ್ಲೇ ಒಂದು ಅಂಗಡಿಯಲ್ಲಿ ಇಟ್ಟು, ಅಡಿಕೆ ಪಟ್ಟೆಗಳನ್ನು (ಅಡಿಕೆ ಎಲೆಗಳಿಂದ ಮಾಡಿದ ತಟ್ಟೆ) ಕೊಂಡುಕೊಳ್ಳಲು ಹೋದೆ.
ಆ ಅಂಗಡಿಯಲ್ಲಿ ಇದ್ದಿದ್ದು ಒಬ್ಬಳು ಮಹಿಳೆ, ಸುಮಾರು ೨೫-೨೬ ವರ್ಷ ಇರಬಹುದೇನೋ. ಕೈಯಲ್ಲಿ ಸುಮಾರು ಒಂದು ವರುಷದ ಮಗು, ಕಾಲ ಬುಡದ ಹತ್ತಿರ ಮತ್ತೊಂದು ಮಗು, ಸುಮಾರು ೩ ವರುಷ ವಯಸ್ಸಿನ ಹುಡುಗಿ. ಅಂಗಡಿಯಲ್ಲಿ ಬೇರೆ ಯಾರು ಇರಲಿಲ್ಲ. ಅಂಗಡಿಯ ಜವಾಬ್ದಾರಿಯೆಲ್ಲವೂ ಆಕೆಗೇ. ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾಳೆ ಭೇಷ್ ಅನಿಸಿತು.
ಅಡಿಕೆ ಪಟ್ಟೆಗಳನ್ನು ನೋಡಿ, ಬೆಲೆ ವಿಚಾರಿಸಿ, ದೊಡ್ಡ ಗಾತ್ರದ ಪಟ್ಟೆಗಳನ್ನು ಕೊಂಡುಕೊಳ್ಳುವೆ, ೨೦೦ ಪಟ್ಟೆಗಳು ಬೇಕು ಎಂದೆ.
"ಬ್ಯಾಗ್ ಇದೆಯಾ ಅಣ್ಣ?" ಎಂದಳು.
"ಇಲ್ಲ ೨೦೦ ಪಟ್ತೆಗಳಿಗೆ ಬಾಗ್ ಸಾಕಾಗುವುದಿಲ್ಲ. ಒಂದು ಗೋಣಿಚೀಲದಲ್ಲಿ ಹಾಕಿ ಕೊಡು."
"ಸೆರಿ ಅಣ್ಣ."
ಪಟ್ಟೆಗಳು ಇಟ್ಟಿದ್ದ ಸ್ಥಳ ನನಗೆ ಕಾಣಿಸುತ್ತಿರಲಿಲ್ಲ. ಒಂದು ಪರದೆ ಅಡ್ಡ ಇತ್ತು. ಒಂದು ಪಟ್ಟೆಯ ಗಂಟನ್ನು ತೋರಿಸಿ, ಆ ತರಹದ ಪಟ್ಟೆಗಳನ್ನು ಹಾಕು ಎಂದು ಹೇಳಿದೆ. ಒಂದು ಗೋಣಿಚೀಲದಲ್ಲಿ ಹಾಕಿ ಚೀಲದ ಬಾಯನ್ನು ಕಟ್ಟುತ್ತಿದ್ದಾಗ -
"ಏನಮ್ಮ ಇದರಲ್ಲಿ ೨೦೦ ಪಟ್ಟೆಗಳು ಇದೆಯಾ?" ಎಂದು ಕೇಳಿದೆ.
"ಹು ಅಣ್ಣ. ನೀವೇ ಒಂದು ಸಲ ನೋಡ್ಬಿಡಿ ಬೇಕಿದ್ದರೆ."
"ಪರವಾಗಿಲ್ಲ ಬಿಡು. ನಿನ್ನನ್ನ ನಂಬ್ತೀನಿ."
ಎಲ್ಲವನ್ನೂ ಕೊಂಡು, ಚೀಲವನ್ನು ನನ್ನ ಬೈಕಿನ ಹಿಂಬಾಗಕ್ಕೆ ಕಟ್ಟಿ, ಮನೆಗೆ ಬಂದದ್ದೇ ಒಂದು ಸಾಹಸ. ಸ್ವಲ್ಪ ಹೊತ್ತು ನಂತರ, ಚೀಲವನ್ನು ಬಿಚ್ಚಿ ಅಡಿಕೆ ಪಟ್ಟೆಗಳನ್ನು ತೆಗೆದಾಗ, ನನಗೆ ಎಲ್ಲಿಲ್ಲದ ಕೋಪ. ದೊಡ್ಡ ಗಾತ್ರದ ೨೦೦ ಪಟ್ಟೆಗಳನ್ನು ಕೇಳಿದರೆ, ಅಲ್ಲಿ ಇದ್ದದ್ದು ೯೦ ದೊಡ್ಡ ಗಾತ್ರದ ಮತ್ತು ೭೫ ಸ್ವಲ್ಪ ಚಿಕ್ಕದಾದ ಪಟ್ಟೆಗಳು. ಈ ಲೋಕದಲ್ಲಿ ನಂಬಿಕೆಗೆ ಬೆಲೆಯೇ ಇಲ್ಲವೇ? ಸೆರಿ, ಇನ್ನೇನು ಮಾಡುವುದು, ನನ್ನ ಹಣೆಯಲ್ಲಿ ಇವತ್ತು ಮೋಸಹೊಗಬೇಕು ಎಂದು ಬರೆದಿದೆ ಅಷ್ಟೆ. ನಾನೇ ಎಣಿಸಿ ತರಬೇಕಿತ್ತು. ಸುಮ್ಮನಾಗಿಬಿಡೋಣ ಎಂದು ನಿಶ್ಚಯ ಮಾಡಿದ್ದೆ. ನಾಳೆ ಯಾವತ್ತಾದ್ರು, ನೀನು ಮೋಸ ಹೋಗಿ ಅದನ್ನು ಪ್ರಶ್ನಿಸಲಿಲ್ಲ ಎಂದು ವಿಷಾದ ಉಂಟಾದರೆ? ಅಂಗಡಿಗೆ ಹೋಗಿ ಒಂದು ಸಲ ಕೇಳಿಯೇ ಬಿಡೋಣ. ಅವಳು ಒಪ್ಪಿದರೆ ಸೆರಿ, ಇಲ್ಲದಿದ್ದರೆ ಅವಳಿಗೆ ಒಳ್ಳೆಯದನ್ನೇ ಹರಸಿ ಮರಲಿಬಿಡೋಣ ಎಂದು ಚಿಕ್ಕ ಗಾತ್ರದ ಪಟ್ಟೆಗಳನ್ನು ಒಂದು ಚೀಲದಲ್ಲಿ ಹಾಕಿ ಹೊರಟೇಬಿಟ್ಟೆ.
"ಏನಮ್ಮ, ನಾನು ಬೆಳಗ್ಗೆ ಬಂದು ೨೦೦ ಪಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದೆ. ಜ್ಞಾಪಕ ಇದಿಯಾ?"
"ಹು ಅಣ್ಣ."
"ನೀನು ಎಷ್ಟು ಕೊಟ್ಟೆ?""ಯಾಕಣ್ಣ, ಕಮ್ಮಿ ಇತ್ತಾ?"
ತಂದಿದ್ದ ಸಣ್ಣ ಗಾತ್ರದ ಪಟ್ಟೆಗಳನ್ನು ತೋರಿಸಿ, "ಈ ಸಿಜಿನದು ೭೫ ಕೊಟ್ಟಿದ್ದೀಯ. ನಾನು ಕೇಳಿದ ಗಾತ್ರದಲ್ಲಿ ೯೦ ಮನೇಲಿ ಇದೆ. ಹೀಗಾ ಮೋಸ ಮಾಡೋದು ನೀನು?"
"ಇಲ್ಲ ಅಣ್ಣ. ಗೊತ್ತಾಗ್ಲಿಲ್ಲ. ಮೋಸ ಮಾಡಿಲ್ಲಣ್ಣ. ಇನ್ನು ಎಷ್ಟು ಕೊಡಬೇಕು ಅಂತ ಹೇಳಿ, ಕೊಡ್ತೀನಿ."
"ಈ ಪಟ್ಟೆಗಳನ್ನು. ನೀನೆ ಇಟ್ಕೋ. ನನಗೆ ದೊಡ್ಡ ಪಟ್ಟೆಗಳೇ ಬೇಕು. ಇದು ನನಗೆ ಉಪಯೋಗ ಆಗೋಲ್ಲ. ಮನೇಲಿ ೯೦ ಇದೆ. ಇನ್ನು ೧೧೦ ಕೊಡಬೇಕು."
"ಆಯ್ತು ಅಣ್ಣ. ಪಕ್ಕದ ಅಂಗಡಿಯಿಂದ ತೊಗೊಂದ್ಬರ್ತೀನಿ. ನನ್ನ ಹತ್ರ ದೊಡ್ದಿಲ್ಲ."
"ಅದನ್ನ ಬೆಳಗ್ಗೆಯೇ ಹೇಳಬಹುದಿತ್ತಲ್ವಾ. ನಾನೇ ಪಕ್ಕದ ಅಂಗಡಿಯಿಂದ ತೊಗೊತಿದ್ದೆ."
"ಇದು ಚಿಕ್ಕದು ಅಂತ ಗೊತ್ತಾಗ್ಲಿಲ್ಲ ಅಣ್ಣ."
"ಸೆರಿ. ತೊಗೊಂಡ್ಬಾ. ಇನ್ನು ನೂರು ಕೊಡು ಸಾಕು. ೧೦ ಕಡಿಮೆ ಆದರೂ ಪರವಾಗಿಲ್ಲ."
ಪಕ್ಕದ ಅಂಗಡಿಯಿಂದ ತೊಗೊದ್ಬಂದು, "ನೀವೇ ಎಣ್ಸಿ ಅಣ್ಣ. ನನಗೆ ಅಷ್ಟೊಂದು ಎಣ್ಸಕ್ಕೆ ಬರೋಲ್ಲ."ನಾನೇ ಎಣ್ಸಿ ೧೦೦ ಪಟ್ಟೆಗಳನ್ನ ಮನೆಗೆ ತೊಗೊಂದ್ಬಂದೆ.
ಆಗ ನನಗೆ ಅನಿಸಿತು, ಈ ಲೋಕದಲ್ಲಿ ನಂಬಿಕೆಗೆ ಇನ್ನು ಬೆಲೆ ಇದೆ ಎಂದು. ಎಷ್ಟು ಸಣ್ಣ ವಿಷಯ ಅಲ್ವ ಇದು. ಪಾಪ ಅವಳಿಗೆ ಎಣಿಸುವುದು ಬರೋಲ್ಲ. ನಿಜವಾಗಲೂ ಮೋಸ ಮಾಡ್ಬೇಕು ಅಂತ ಇದ್ದಿದ್ದರೆ, ನನ್ನನ್ನ ನಂಬುವ ಅವಶ್ಯಕತೆಯೇ ಇರಲಿಲ್ಲ. ಅನಾವಶ್ಯಕವಾಗಿ, ಅವಳ ಬಗ್ಗೆ ತಪ್ಪು ತಿಳಿದಿದ್ದೆ. ಹೋಗಿ ವಿಚಾರಿಸಿದ್ದು ಒಳ್ಳೆಯದೇ ಆಯಿತು. ಹೀಗೇ ಜೀವನದಲ್ಲಿ ಪರಸ್ಪರ ನಂಬಿಕೆಯಿಲ್ಲದೆ, ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿಸಿ, ದ್ವೇಷ, ಅಸೂಯೆಗಳಿಗೆ ಎಲೆ ಹಾಕುವೆವು, ಆಲ್ವಾ?
ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೆರಳಿ
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ? ಮಂಕುತಿಮ್ಮಾ
ಶ್ರೀ ರಾಮ ಪಟ್ಟಾಭಿಷೇಕ ಸುಸೂತ್ರದಿಂದ ಮುಗಿಯುತ್ತಲೇ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಹರಡಿದೆ.
ಸರ್ವಂ ಶ್ರೀ ಕ್ರಿಶ್ಣಾರ್ಪಣಮಸ್ತು.