Wednesday, July 22, 2009

ವ್ಯಕ್ತಿಯೋ ಕಲೆಯೋ

ಸಾದಾರಣವಾಗಿ ಒಂದು ಕಾರ್ಯಕ್ರಮಕ್ಕೆ (ಯಾವುದೇ ಕಾರ್ಯಕ್ರಮ ಆಗಿರಲಿ) ಹೋಗುವ ಮುಂಚೆ, ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವ್ಯಕ್ತಿ ವಿವರಗಳನ್ನು ತಿಳಿದು, ಅನಂತರ ಅದಕ್ಕೆ ಹೋಗಬೇಕ ಬೇಡವಾ ಅಂತ ಯೋಚನೆ ಮಾಡ್ತಿವಿ ಅಲ್ವೇ? ಉದಾಹರಣೆಗೆ ಒಂದು ಸಿನೆಮಾಗೆ ಹೋಗೋಣ ಎಂದು ಯಾರಾದ್ರು ಕರೆದರೆ, ನಾವು ಕೇಳುವುದು ಯಾರು ಹೀರೋ? ಯಾರು ಹೀರೋಇನ್ನು? ಯಾರದು ನಿರ್ದೇಶನ? ಅಂತ. ಅವರ್ಯಾರಾದ್ರು ನಮಗೆ ಪರಿಚಯವಿದ್ದು, ನಮಗೆ ಇಷ್ಟವಾಗಿದ್ದರೆ ಮಾತ್ರ ಹೋಗುತ್ತೇವೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಸ್ವಲ್ಪ ಹಾಗೇ.

ಇಲ್ಲಿ ಪ್ರಶ್ನೆ ಯೇನಪ್ಪಾ ಅಂದ್ರೆ, ನಮ್ಮ ಹಲವಾರು ನಿರ್ಧಾರ ಒಬ್ಬ ವ್ಯಕ್ತಿಯ ಆದಾರದ ಮೇಲೆ. ಆ ವಿಷಯ ಅಥವಾ ಕಲೆಯ ಆದಾರದ ಮೇಲಲ್ಲ. ಇದು ಸಿನೆಮಾ ಲೋಕಕ್ಕೆ ಸೀಮಿತವಾದುದಲ್ಲ. ಸಂಗೀತ, ನೃತ್ಯ, ಭಾಷಣ ಎಲ್ಲಾ ಕ್ಷೇತ್ರದಲ್ಲೂ ಹೀಗೇ. ಇದರಲ್ಲಿ ಸರಿ ಅಥವಾ ತಪ್ಪು ಪ್ರಶ್ನೆ ಬರೋಲ್ಲ. ಆದ್ರೆ ಈ ತರಹದ ನಿರ್ಧಾರದಿಂದ ನಾವು ಅರಿವಿಲ್ಲದೆ ಕೆಲವೊಂದನ್ನು ಕಳೆದುಕೊಳ್ಳುತ್ತೇವೆ.
ಮೊನ್ನೆ ಒಂದು ಭರತನಾಟ್ಯ ಕಾರ್ಯಕ್ರಮಕ್ಕೆ ಹೋಗಿದ್ದೆ. ನಡೆಸಿಕೊಟ್ಟವರು ನನ್ನ ಸ್ನೇಹಿತನಾದ ಶ್ರೀ ವೆಂಕಟೇಶ್ ಅಯ್ಯಂಗಾರ್ ಮತ್ತು ಅವನ ಶಿಷ್ಯರು. ಅವನು ನನ್ನ ಸ್ನೇಹಿತನು ಎಂದೇ ನಾನು ಹೋಗಿದ್ದು. ಇಲ್ಲವಾದಲ್ಲಿ ನಾನು ಹೋಗುತ್ತಿರಲಿಲ್ಲವೇನೋ. ೩೦ ವರುಷದ ವೆಂಕಟೇಶ್, ನೃತ್ಯದಲ್ಲೇ ನನ್ನ ಜೀವನ ಅಂತ ತೀರ್ಮಾನಿಸಿ, ಅದರಲ್ಲೇ ಸದಾಕಾಲ ಮುಳುಗಿದ್ದು, ಬೆಂಗಳೂರಿನ ಮತ್ತಿಕೆರೆಯಲ್ಲಿ "ಕಿಂಕಿಣಿ" ನೃತ್ಯಶಾಲೆಯನ್ನು ಪ್ರಾರಂಬಿಸಿದ.

ನಾನು ಬಹಳಷ್ಟು ನೃತ್ಯ ಕಾರ್ಯಕ್ರಮಗಳಿಗೆ ಹೋಗಿಲ್ಲವಾದರೂ, ಇಂತಹ ನೃತ್ಯವನ್ನು ನಾನು ಎಂದೂ ಕಂಡಿರಲಿಲ್ಲ. ಒಂದೊಂದು ಹಾಡಿನ ಪ್ರಾರಂಭದಲ್ಲಿ ಅದರ ಪೀಠಿಕೆಯ ಮೂಲಕ ಅದರ ಸನ್ನಿವೇಶವನ್ನು ವಿವರಿಸಿ ನಂತರ ನಾಟ್ಯವನ್ನು ಮಾಡುತ್ತಿದ್ದರು. ಗಜೇಂದ್ರ ಮೋಕ್ಷ, ಶ್ರೀ ರಾಮ ಪಟ್ಟಾಭಿಷೇಕ ಮುಂತಾದ ಸನ್ನಿವೇಶಗಳಲ್ಲಿ, ಇದು ಭಾರತನಾಟ್ಯವೋ, ನಾಟಕವೋ ಎಂದೇ ತಿಳಿಯುತ್ತಿರಲಿಲ್ಲ. ತಾಳಕ್ಕೆ ತಕ್ಕಂತೆ ಮೆಟ್ಟುಗಳನ್ನು ಹಾಕುತ್ತಾ, ಪಾತ್ರಕ್ಕೆ ತಕ್ಕಂತೆ ಮುಖದಲ್ಲಿ ಭಾವನೆಯನ್ನು ತೋರುತ್ತಾ, ಪ್ರಸಂಗಕ್ಕೆ ಹೊಂದುವ ನೃತ್ಯವನ್ನು ಮಾಡುತ್ತಿದ್ದರು. ನೋಡುವುದಕ್ಕೆ ಎರಡು ಕಣ್ಣುಗಳು ಸಾಲದೇ ಹೋಯಿತು.

ಅಲ್ಲಿ ನಾನು ತೆಗೆದ ಕೆಲವೊಂದು ಚಿತ್ರಗಳು.







ಆದರೆ ಸಭಾಂಗಣ ಅರ್ಧವೂ ತುಂಬಿರಲಿಲ್ಲ. ಇದೇ ಪದ್ಮ ಸುಬ್ರಮಣ್ಯಮ್ ಅಥವಾ ಇನ್ಯಾರೋ ಖ್ಯಾತ ವ್ಯಕ್ತಿ ಆಗಿದ್ದರೆ, ಸಭಾಂಗಣ ತುಂಬಿರುತ್ತಿತ್ತು.

12 comments:

SSK said...

ರಾಜೀವ್ ಅವರೇ,
ನಿಮ್ಮ ಅನಿಸಿಕೆ ಅಕ್ಷರಸಹ ಸತ್ಯ, ಇದು ಸಾಮಾನ್ಯವಾಗಿ ಎಲ್ಲರಿಗೂ ಆಗುವಂತಹ ಅನುಭವ! ನೃತ್ಯ ಫೋಟೋಗಳು ಚೆನ್ನಾಗಿವೆ.
ನನಗೆ ಡಾನ್ಸ್ ಎಂದರೆ ತುಂಬಾನೇ ಇಷ್ಟ. ನಾನು ಡಾನ್ಸ್ ಕಲಿಯಬೇಕೆಂಬುದು ಬಾಲ್ಯದಿಂದಾ ನನ್ನೊಂದಿಗೆ ಬೆಳೆದು ಬಂದ ಕನಸು!! ಆದರೆ ಇದು ನನಸಾಗಲೇ ಇಲ್ಲ, ಎಲ್ಲದಕ್ಕೂ ಅದೃಷ್ಟ ಇರಬೇಕು ಅಲ್ಲವಾ?
ಅಂದಹಾಗೆ ನನಗೆ ಇಂತಹ ನಾಟ್ಯಗಳನ್ನು ನೋಡುವ ಹವ್ಯಾಸ ಇದೆ. ಟಿವಿಯಲ್ಲಿ ಇಂತಹ ಕಾರ್ಯಕ್ರಮಗಳು ಬಂದರೆ ನಾನಂತೂ ನೋಡುತ್ತಾ ನೋಡುತ್ತಾ ಅದರಲ್ಲೇ ಮುಳುಗಿ ಬಿಡ್ತೀನಿ ಅಷ್ಟು ಇಷ್ಟ ನನಗೆ!!!
ಆದ್ದರಿಂದ ತಾವು ಇಂತಹ ಕಾರ್ಯಕ್ರಮದ ಬಗ್ಗೆ ಮೊದಲೇ ತಿಳಿಸಿದರೆ, ಸಾಧ್ಯವಾದಷ್ಟು ಬಿಡುವು ಮಾಡಿಕೊಂಡು ಹೋಗಿ ನೋಡಬೇಕೆಂಬ ಆಸೆ, ತಿಳಿಸುತ್ತೀರಾ ಅಲ್ಲವಾ?

shivu.k said...

ರಾಜೀವ್ ಸರ್,

ವ್ಯಕ್ತಿ ಮತ್ತು ಕಲೆ ವಿಚಾರ ಬಂದಾಗ ವ್ಯಕ್ತಿ ನಮಗೆ ಹತ್ತಿರವಾಗಿದ್ದರೇ ಖಂಡಿತ ಇಷ್ಟವಿಲ್ಲದಿದ್ದರೂ ಹೋಗಿರುತ್ತೇವೆ. ಬಹುಶಃ ವ್ಯಕ್ತಿ ನಮ್ಮವನು ಮತ್ತು ಕಲೆಯಲ್ಲೂ ಸಾಧನೆಗೈದಿದ್ದರೇ...ಅದು ನಮ್ಮ ಅದೃಷ್ಟ. ಮತ್ತೆ ಸಿನಿಮಾ ವಿಚಾರ ಬಂದಾಗ ಅದರಲ್ಲೂ ಹಾಲಿವುಡ್ಡಿನಲ್ಲಿ ಕೆಲವು ಸಿನಿಮಾಗಳ ಟ್ರೈಲರ್ ನೋಡಿ ಹೋಗಿಬಿಡುತ್ತೇವೆ. ಅದು ಅದ್ಬುತವಾಗಿದ್ದರೇ ನಂತರ ಅದರ ನಿರ್ದೇಶಕ, ನಟ, ಛಾಯಾಗ್ರಾಹಕ, ಲೊಕೇಶನ್ ಇತ್ಯಾದಿಗಳನ್ನು ತಿಳಿದುಕೊಳ್ಳಲು ಪ್ರಯತ್ನ್ನಿಸುತ್ತೇವೆ..

ಮತ್ತೆ ನನಗೆ ಎಲ್ಲಾ ಪ್ರಕಾರದ ಕಲೆಗಳಲ್ಲೂ ಆಸಕ್ತಿಯಿದೆ. ಇಲ್ಲಿ ವ್ಯಕ್ತಿಗಿಂತ ಕಲೆಯೇ ಮುಖ್ಯವೆಂದುಕೊಂಡವನು ನಾನು ಮತ್ತು ಅದನ್ನು ಸಾಧಿಸಿದ ವ್ಯಕ್ತಿ ಪರಿಚಯವಿಲ್ಲದಿದ್ದರೂ ಆತನ ಕಲೆಯನ್ನು ನಾನು ಅಶ್ವಾದಿಸುತ್ತೇನೆ....

ಒಳ್ಳೆಯ ವಿಚಾರವನ್ನು ಬರೆದಿದ್ದೀರಿ...ಧನ್ಯವಾದಗಳು.

ರಾಜೀವ said...

ಎಸ್.ಎಸ್.ಕೆ. ಅವರೆ,

ಅದೃಷ್ಟವನ್ನು ನಂಬಿ ಕೂರಬೇಡಿ. ನಿಮಗೆ ಇಷ್ಟ ಇದ್ದರೆ ಈಗಲೂ ನೀವು ನೃತ್ಯವನ್ನು ಕಲಿಯಬಹುದು. ಮೊದಲನೇ ಹೆಜ್ಜೆ ಇಟ್ಟು ನೋಡಿ. ನಂತರ ಅದೇ ಮುಂದಕ್ಕೆ ಸಾಗಿಕೊಂಡು ಹೋಗುತ್ತೆ.

ಮುಂದೆ ಇಂತಹ ಕಾರ್ಯಕ್ರಮಗಳ ಬಗ್ಗೆ ಸೂಚನೆ ಕೊಡುತ್ತೇನೆ. ನಿಮ್ಮ ಇ-ವಿಳಾಸವನ್ನು rrajeevl@gmail.com ಗೆ ಕಳಿಸಿ.

ಪ್ರತಿಕ್ರಿಯೆಗೆ ದನ್ಯವಾದ.

ರಾಜೀವ said...

ಶಿವು ಸರ್,

ಎಲ್ಲಾ ಕ್ಷೇತ್ರದಲ್ಲೂ ಹೀಗೆ. ನಾನೂ ಕೂಡ. ಆದರೆ ಮನೆಯ ಹತ್ತಿರ ಇಂತಹ ಕಾರ್ಯಕ್ರಮಗಳು ನಡೆದರೆ ನಾವೂ ಪಾಲ್ಗೊಳ್ಳಲು ಪ್ರಯತ್ನ ಮಾಡಬೇಕು. ಆಗಲೇ ಸಮಾಜದಲ್ಲಿ ನಾವೂ ಭಾಗಿ ಎಂದು ಅನ್ನಿಸಿಕೊಳ್ಳುವುದು, ಅಲ್ಲವೇ?

ನಾನು ಒಂದು ಹೊಸ ಕ್ಯಾಮೆರಾ ಕೊಂಡೆ ಎಂದು ನಿಮಗೆ ಹೇಳಿದ್ದೆ. ಅದರಿಂದ ಮೊದಲನೆಯ ಬಾರಿಗೆ ಕ್ಲಿಕ್ಕಿಸಲು ಪ್ರಯತ್ನಿಸಿದ್ದು ಈ ಕಾರ್ಯಕ್ರಮದಲ್ಲೇ.

Srinivas Girigowda said...
This comment has been removed by the author.
Srinivas Girigowda said...

ಇದು ಮಾನವನ ಸಹಜ ಗುಣ. ಕೆಲವನ್ಣ ನೋಡಿ, ಕೆಲವನ್ಣ ಕೇಳಿ, ಕೆಲವನ್ಣ ಅನುಭವಿಸಿ ನಂಬುತ್ತೇವೆ. ತಮ್ಮ ಮಿತ್ರನ ನಾಟ್ಯ ಕೂಡ ಹೀಗೆ ನಿಧಾನವಾಗಿ ಜನರನ್ನು ಆಕರ್ಷಿಸುತ್ತದೆ. ಬಹುಶ ಪದ್ಮ ಸುಬ್ರಮಣ್ಯಮ್ ಕೂಡ ತಮ್ಮ ಪ್ರಾರಂಭದ ದಿನಗಳಲ್ಲಿ ಇದೆ ರೀತಿ ಅನುಭವಿಸಿರುತ್ತಾರೆ. ನಿಮ್ಮ ಮಿತ್ರನು ಕೂಡ ಮುಂದೆ ವಿಶ್ವವಿಖ್ಯಾತಿ ಯಾಗಲೆಂದು ನಾನು ಹಾರೈಸುತ್ತೇನೆ.

ತಾಳಿದವನು ಬಾಳಿಯಾನು !!!!

Ittigecement said...

ರಾಜೀವ್....

ಝಾಕಿರ್ ಹುಸೇನ್ ತಬಲಾ ಅಂದರೆ ಜನ ಸೇರುತ್ತಾರೆ...
ಅಷ್ಟೇ ಚೆನ್ನಾಗಿ ನುಡಿಸುವ...
ಹೊಸ ಕಲಾವಿದನ ಕಾರ್ಯಕ್ರಮಕ್ಕೆ ಹೋಗಲು ಮನಸ್ಸು ಬರುವದಿಲ್ಲ...

ಇದು ತಪ್ಪು...

ನಿಮ್ಮ ಫೋಟೊಗಳು ತುಂಬಾ ಚೆನ್ನಾಗಿವೆ...
ನಾವು ಆ ಕಾರ್ಯಕ್ರಮಕ್ಕೆ ಹೋಗಿ ಬಂದಾಂತಾಯಿತು....

ಎಷ್ಟು ಚಂದ ಆ...ವೇಷ ಭೂಷಣ...!!

ರಾಜೀವ said...

ಶ್ರೀನಿ,
ನಿಜ ನೀ ಹೇಳಿದ್ದು.

ಪ್ರಕಾಶ್ ಸರ್,
ನೋಡಕ್ಕೆ ವೇಷ ಭೂಷಣ ಚೆನ್ನಾಗಿರತ್ತೆ.
ಆದ್ರೆ ಒಂದು ಗಂಟೆ ಕಾರ್ಯಕ್ರಮಕ್ಕೆ ಅರ್ಧ ದಿನ ಬೇಕಾಗತ್ತೆ ಆ ವೇಷ ಹಾಕೊಳಕ್ಕೆ.

ಪ್ರತಿಕ್ರಿಯೆಗೆ ದನ್ಯವಾದ.

ಬಾಲು said...

ರಾಜೀವ ಅವರೇ,
ವಿಚಾರ ತುಂಬಾ ಚೆನ್ನಾಗಿದೆ, ಆದರೆ ವಿಷಯ ಅಂದ್ರೆ ನಮ್ಮ ಜನರು ಎಷ್ತಾಬ್ಲಿಷೆದ್ ಕಲಾವಿದ, ಬರಹ ಗಾರನ ನನ್ನು ಮಾತ್ರ ನೋಡುತ್ತಾರೆ. ಒಬ್ಬ ಸಾಮಾನ್ಯ ಮನುಷ್ಯ ಅದ್ಭುತವಾಗಿ ನಾಟ್ಯ ಮಾಡಿದ್ರೆ ಅಥವಾ ಒಳ್ಳೆ ಕೃತಿ ರಚನೆ ಮಾಡಿದ್ರೆ ಜನ ನೋಡ್ತಾರ? ಇದು ಹೇಗೆಂದರೆ ನಮ್ಮಲ್ಲಿ ಹಲವಾರು ಜನ ಜನಪ್ರೀಯ ಕೆಟ್ಟ ಬರಹಗಾರರು ಇದ್ದರಲ್ಲ ಹಾಗೆ. ಅವರು ಏನು ಬರೆದರು, ಜನ ಕೊಂಡು ಓದುತ್ತಾರೆ, ಆದರೆ ಅದರ ಮಾನದಂಡಗಳು ಏನು ಎಂದು ಯಾರು ಕೇಳೋಲ್ಲ.
ಭಾಗಷ್ಯ ಇದು ಇಲ್ಲಿ ಮಾತ್ರ ಅಲ್ಲ ಅನ್ಸುತ್ತೆ, ಜನ ಪ್ರೀಯ ಚಿತ್ರ ಕಾರರು ಸತ್ತ ಮೇಲೆ ತಾನೇ ಜನ ಮಾನಸ ಸೇರಿದ್ದು?

ನಿಮ್ಮ ಸ್ನೇಹಿತರಿಗೆ ಇನ್ನೂ ಚಿಕ್ಕ ವಯಸ್ಸು, ಮುಂದೆ ಹೆಸರು ಗಳಿಸಲಿ ಎಂದು ಹಾರೈಸುವೆ. ಮತ್ತೆ ಯಾರೂ ಗಾಡ್ ಫಾದರ್ ಗಳು ಇಲ್ಲ ಅಂದ್ರೆ ಮೇಲೆ ಬರೋಕೆ ಸ್ವಲ್ಪ ಟೈಮ್ ತಗೊಳುತ್ತೆ ಅಲ್ವ?

ರಾಜೀವ said...

ಬಾಲು,

ಹೌದು ಸರ್. ಎಲ್ಲಾ ಕ್ಷೇತ್ರದಲ್ಲೂ ಹೀಗೆ. ಎಲ್ಲರೂ ಹೀಗೇ. ನನ್ನನ್ನೂ ಒಳಗೊಂಡು. ಇದು ತಪ್ಪು ಅಂತ ನಾನು ಹೇಳ್ತಾ ಇಲ್ಲ. ಆದರೆ ಇದರಿಂದ ನಮಗೇ ನಷ್ಟ ಆಗಬಹುದು. ಸಾಧ್ಯವಾದಷ್ಟೂ ಮುಕ್ತ ಮನಸ್ಸಿನಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಒಳ್ಳೆಯದು.

ಪ್ರತಿಕ್ರಿಯೆಗೆ ಧನ್ಯವಾದ.

Prabhuraj Moogi said...

ಇದೊಂಥರಾ ಕೊಳಿ ಮೊದಲ ಮೊಟ್ಟೆ ಮೊದಲಾ ಪ್ರಶ್ನೆ... ಪ್ರಸಿದ್ಧ ಆಗಬೇಕು ಅಂದ್ರೆ ಜನ ಬರಬೇಕು, ಜನ ಬರಬೇಕು ಅಂದ್ರೆ ಪ್ರಸಿದ್ಧರಾಗಿರಬೇಕು... ಒಳ್ಳೆ ಕಲೆ ಇದ್ರೆ ವ್ಯಕ್ತಿ ಪ್ರಖ್ಯಾತಿಪಡೆಯುತ್ತಾನೆ ಆದರೂ ಕೆಲವರು ಕಲೆಯಿಲ್ಲದೆಯೂ ಎನೊ ಮಾಡಿ ಪ್ರಖ್ಯಾತರಾಗಿರುತ್ತಾರೆ! ಒಳ್ಳೆ ಹವ್ಯಾಸ ಇದೆ ಭರತನಾಟ್ಯ ಎಲ್ಲ ನೋಡುತೀರಿ, ನನಗೆ ಸಮಯ ಇಲ್ಲ ಅನ್ನೊ ನೆಪ ಜಾಸ್ತಿ.

ರಾಜೀವ said...

ಪ್ರಭು,

ಈತ ನನ್ನ ಸ್ನೇಹಿತನಿಲ್ಲದಿದ್ದರೆ ನಾನು ಯಾಕೆ ಹೋಗ್ತಿದ್ದೆ? ನನ್ನ ಹವ್ಯಾಗಳನ್ನ ನೀವೇ ಮೆಚ್ಬೇಕು ;)

ಹೀಗೇ ಬರ್ತಾ ಇರಿ.