Thursday, January 28, 2010

ಯಾಮಿನಿ - ೨೦೧೦ (ಭಾಗ -೧)


ಈ ಸಲ ಚೆಳಿ ಸ್ವಲ್ಪ ಹೆಚ್ಚು ಅನ್ಸತ್ತೆ. ಆಫೀಸಿಂದ ಬೈಕ್ನಲ್ಲಿ ಬರೋವಾಗ ಮನೆ ತಲುಪಿದರೆ ಸಾಕು ಅನ್ನುವಷ್ಟು ಮೈ ಕೊರಿತಿರತ್ತೆ. ಸಂಜೆ ೭:೦೦ ಗಂಟೆಗೇ ಈ ಪರಿಸ್ಥಿತಿ ಆದ್ರೆ, ಇನ್ನು ರಾತ್ರಿ ಹೊತ್ತಿನಲ್ಲಿ ಇನ್ಹೇಗಿರತ್ತೋ ನಾ ಕಾಣೆ. ರಾತ್ರಿ ಹೊತ್ತು ಹೊರಗೆ ಇದ್ದು, ಈ ಮಂಜಿನ ಜೊತೆ ಸರಸ ಆಡ್ತಾ ಇರೋ ಮಜ ಅನುಭವಿಸಿದವರಿಗೇ ಗೊತ್ತು. ಈ ಅನುಭವವನ್ನು ಮೊನ್ನೆ ಪುನಃ ಪಡೆಯಲು ಅವಕಾಶ ಮಾಡಿಕೊಟ್ಟದ್ದು ಯಾಮಿನಿ - ೨೦೧೦. ಐಐಎಮ್-ಬಿ ವತಿಯಿಂದ ಪ್ರತಿ ವರುಷ ಯಾಮಿನಿ ಎಂಬ ಹೆಸರಿನಲ್ಲಿ ಒಂದು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ http://www.iimb-yamini.com/ ನೋಡಿ. ಯಾಮಿನಿಯ ವಿಷೇಶ ಅಂದ್ರೆ ಸಂಜೆ ೬:೩೦ಗೆ ಪ್ರಾರಂಭವಾಗುವ ಸಂಗೀತ ಕಾರ್ಯಕ್ರಮ, ಇಡೀ ರಾತ್ರಿ ಜಾರಿಯಲ್ಲಿದ್ದು, ಮರುದಿನ ಬೆಳಗ್ಗೆ ೬:೦೦ಗೆ ಮುಕ್ತಾಯವಾಗುತ್ತದೆ. ಈ ಸಲ ನನಗೆ ಈ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಒದಗಿ ಬಂದಿತು.

೨೫ನೇ ತಾರೀಕು ಸಂಜೆ ಹೊರಡಬೇಕು. ಮರುದಿನ ಗಣರಾಜ್ಯೋತ್ಸವವಿದ್ದರಿಂದ ಕಚೇರಿಗೆ ರಜ. ಕಚೇರಿಯಿಂದ ಬೇಗ ಮನೆಗೆ ಬಂದು ಹೊರಡಲು ಸಿದ್ದವಾದೆ. ಮುರಳಿ, ನವೀನ ನನ್ನ ಜೊತೆ ಕೈ ಜೋಡಿಸಿದರು. ಮೂರೂ ಜನ ಎರಡು ವಾಹನಗಳಲ್ಲಿ ಐಐಎಮ್-ಬಿ ಸೇರುವ ಹೊತ್ತಿಗೆ ಸುಮಾರು ೭:೦೦ ಗಂಟೆ ಆಗಿತ್ತು. ನಮ್ಮ ಪುಣ್ಯ, ಕಾರ್ಯಕ್ರಮ ಇನ್ನೂ ಪ್ರಾರಂಬವಾಗಿರಲಿಲ್ಲ. ವೇದಿಕೆಯ ಸಮೀಪದಲ್ಲಿ, ಮೆತ್ತಗಿನ ಹಾಸಿಗೆಗಳನ್ನು ಹಾಸಿದ್ದರು. ಸುಮಾರು ೫೦೦ ಜನ ಸುಲಲಿತವಾಗಿ ಕೂರಬಲ್ಲಷ್ಟು ಜಾಗದಲ್ಲಿ ಹಾಸಿಗೆಗಳನ್ನು ಹಾಸಿದ್ದರು. ಅದರ ಸುತ್ತಲೂ ಇನ್ನೂ ಸುಮಾರು ೫೦೦ ಜನ ಕೂರಬಹುದಾದಷ್ಟು ಕುರ್ಚಿಗಳನ್ನು ಹಾಕಿದ್ದರು. ಚೆಳಿಗೆ ಮೈ ಬಿಸಿಮಾಡಿಕೊಳ್ಳಲು, ಅಲ್ಲಲ್ಲಿ ಬೆಂಕಿಯನ್ನು (ಕಾಂಪ್ ಫೈರ್) ಹಾಕಿದ್ದರು. ಒಟ್ಟಿನಲ್ಲಿ "Holiday mood at its best" ಎಂದು ಅನಿಸಿತು.

ಕಾರ್ಯಕ್ರಮ ನಿತ್ಯಶ್ರೀ ಮಹದೇವನ್ರವರ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಿಂದ ಪ್ರಾರಂಭವಾಯಿತು. ಇವರ ಇತರ ಕಚೇರಿಗಳನ್ನು ಮುಂಚೆಯೇ ಕೇಳಿದ್ದರಿಂದ ಇವರ ಪ್ರತಿಭೆಯ ಅರಿವು ನನಗಿತ್ತು. ಅವರ ಆಲಾಪನ ಶೈಲಿ, ಸ್ವರಕಲ್ಪನೆಗಳ ವೈವಿಧ್ಯತೆಗಳಿಂದ ಜನರನ್ನು ಮೈಮರೆಸಿದರು. ಎರಡೂವರೆ ಗಂಟೆಗಳ ನಂತರ ತಿಲ್ಲಾನದಿಂದ ಅವರು ಮುಗಿಸಿದಾಗ, ಇನ್ನೂ ಸ್ವಲ್ಪ ಹೊತ್ತು ಹಾಡಬಾರದೆ ಎಂದನಿಸಿತು. ಚೆಳಿ, ಹಸಿವು ಯಾವುದೂ ಹತ್ತಿರ ಸುಳಿಯಲಿಲ್ಲ. ಅವರ ಕೆಲವು ಚಿತ್ರಗಳು (ದೂರದಿಂದ ತೆಗದಿದ್ದು) -












ನಿತ್ಯಶ್ರೀ ಅವರ ಗಾಯನ ಮುಗಿಯುವಷ್ಟರಲ್ಲಿ ಸುಮಾರು ೯:೩೦ ಆಗಿತ್ತು. ಅಷ್ಟು ಹೊತ್ತು ತಾಲ್ಮೆಯಿಂದ ಕೂತಿದ್ದ ಜನ, ತಕ್ಷಣ ಎದ್ದು ತಿಂಡಿಗಳ ಮಳಿಗೆಯ ದಿಕ್ಕಿನಲ್ಲಿ ಓಡಿದರು. ನಾವು ಸಮಾಧಾನವಾಗಿ ಎದ್ದು ಹೋಗುವಷ್ಟರಲ್ಲಿ, ಶ್ರೀ ಕೃಷ್ಣ ಭವನದ ಮಳಿಗೆಯಲ್ಲಿ ಜನಸಾಗರವೇ ಇತ್ತು. ಇನ್ನು ಆ ಸಾಲಲ್ಲೇ ಇದ್ದರೆ ಇವತ್ತು ಉಪವಾಸವೇ ಎಂದು, ಸಾಂಡ್ವಿಚ್ ಇಂದಲೇ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಹೊಟ್ಟೆ ಪೂರ್ತಿ ತುಂಬದಿದ್ದರೂ ಜೇಬಿಗೆ ಮಜಬೂತಾದ ಕತ್ತರಿಯೇ ಬಿದ್ದಿತು :-(

ನಂತರದ ಸರದಿ ಪ್ರಸಿದ್ದ ವೀಣಾವಾದಕಿ ಗಾಯತ್ರಿಯವರದ್ದು. ಚಿಕ್ಕ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿತಿದ್ದರೂ ನನಗೆ ರಾಗಗಳ ಜ್ಞಾನ ಕಡಿಮೆ. ರಾಗ, ತಾಳಗಳಿಗಿಂತ ಸಾಹಿತ್ಯದ ಭಾವ ಇಷ್ಟವಾಗುತ್ತದೆ. ಆದ್ದರಿಂದ ವಾದ್ಯಕ್ಕಿಂತ ಗಾಯನದಲ್ಲಿ ಹೆಚ್ಚು ಒಲವು. ಅಷ್ಟಾದರೂ ವೀಣಾವಾದ್ಯದ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟು ಆಕರ್ಶಕ ವೀಣೆ ನುಡಿತವನ್ನು ನಾನು ಎಂದೂ ಕಂಡಿರಲಿಲ್ಲ. ಅದರಲ್ಲೂನಾರಾಯಣ ಸೂಕ್ತ ಸಾಲುಗಳನ್ನು ಉದಾತ್ತ, ಅನುದಾತ್ತ, ಸ್ವರಿತಗಳ ಒಳಗೊಂಡು ವೀಣೆಯಮೂಲಕ ಪಾರಾಯಣ ಮಾಡಿದ್ದು ವಿಶೇಷ. ಬಂದಿದ್ದಕ್ಕೂ, ನಿದ್ದೆಗೆಟ್ಟು ಕೂತಿದ್ದಕ್ಕೂ ಸಾರ್ಥಕ. ವೀಣೇ ಗಾಯತ್ರಿಯವರ ಚಿತ್ರಗಳು -













ಗಾಯತ್ರಿಯವರ ವೀಣಾವಾದನ ಮುಗಿದಾಗ ಮಧ್ಯರಾತ್ರಿ ೧೨:೦೦ ದಾಟಿತ್ತು. ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಮಾಡಿಕೊಳ್ಳಲು ಸ್ವಲ್ಪ ಸಮಯ ವಿರಾಮ.

... (ಸಶೇಷ)

9 comments:

Guruprasad said...

ರಾಜೀವ
wow,, ರಾತ್ರಿ ಪೂರ್ತ ಜಾಗರಣೆ ಮಾಡಿ,, ಸಂಗೀತ ಕೇಳಿದ್ರ,,, ಸಕತ್ ಆಗಿ ಇತ್ತು ಅಂತ ಕಾಣುತ್ತೆ ಅಲ್ವ... ಗುಡ್ ರೀ,, ನಮಗೂ ಗೊತ್ತಿದ್ದರೆ ನಾವು ಬರ್ತಾ ಇದ್ವಿ...
ಚೆನ್ನಾಗಿ ವಿವರಿಸಿದ್ದಿರ....ಮುಂದಿನ ಭಾಗಕ್ಕಾಗಿ wait ಮಾಡ್ತಾ ಇದ್ದೇನೆ

AntharangadaMaathugalu said...

ರಾಜೀವ್ ಅವರೆ...
ನನಗೆ ನಿಜಕ್ಕೆ ಹೊಟ್ಟೆಕಿಚ್ಚಾಗುತ್ತಿದೆ ರೀ ನಿಮ್ಮ ಅದೃಷ್ಟ ನೆನೆದು. ವಿವರಣೆ ಚೆನ್ನಾಗಿದೆ, ಹೋಗಲಿ ಬೇಗ ಬೇಗ ಮುಂದುವರೆಸಿ, ಓದಿಯಾದರೂ ತೃಪ್ತಿಪಡುತ್ತೇನೆ. ನಿತ್ಯಶ್ರೀಯವರ ಕಛೇರಿ ನಾನೂ ಗಾಯನ ಸಮಾಜದಲ್ಲಿ ಕೇಳಿದ್ದೇನೆ. She is simply superb....

ಶ್ಯಾಮಲ

Naveen Nanjundappa said...

photos ge copy rights hakilla ?

shivu.k said...

ರಾಜೀವ್ ಸರ್,

ನಿಮ್ಮ ವಿವರಣೆ ನಾನು ಅಲ್ಲೇ ಕುಳಿತು ಆಹ್ಲಾದಿಸುವಂತೆ ಮಾಡಿದೆ. ನಾನು ಜನವರಿ ೨೨ರಂದು ವಿದ್ವಾನ್ ಆರ್.ಕೆ.ಶ್ರೀಕಂಠನ್ ರವರ ಸಂಗೀತ ಕಾರ್ಯಕ್ರಮ ಕೇಳಿದೆ. ೯೦ ವರ್ಷವಾದರೂ ಅವರ ಗಾಯನ, ಅಲಾಪ, ನಿಜಕ್ಕೂ ಸೂಪರ್. ನಿಮ್ಮ ನಿರೂಪಣೆ ನನಗೆ ಅದೆಲ್ಲವನ್ನು ನೆನಪಿಸಿತು.

ರಾಜೀವ said...

@ಗುರು,
ಮುಂದಿನ ಸಲವೂ ಇಂತಹದೇ ಕಾರ್ಯಕ್ರಮ ಇರುತ್ತದೆ. ಮಿಸ್ ಮಾಡ್ಕೋಬೇಡಿ,
ಕೆಲಸದ ಒತ್ತಡದಿಂದ ಪೂರ್ತಿ ಬರೆಯಲು ಸಮಯವಿರಲಿಲ್ಲ. ಆದಷ್ಟು ಬೇಗ ಮುಂದಿನ ಭಾಗ ಟೈಪಿಸುತ್ತೇನೆ.

@ಶ್ಯಾಮಲ ಅವರೆ,
ಕ್ಷಮಿಸಿ. ನಾನು ಮುಂಚೆಯೇ ಇದರ ಬಗ್ಗೆ ತಿಳಿಸಬೇಕಿತ್ತು. ನನ್ನಿಂದ ನಿಮಗೆ ಇದು ತಪ್ಪಿಹೋಯಿತು.
ಬೇಗ ಬೇಗ ಮುಂದುವರಿಸಲು ನನ್ನ ಬಾಸ್ ಬಿಡಬೇಕಲ್ಲಾ ;-)

@ನವೀನ,
ಓಕೆ. ಎರಡನೇ ಚಿತ್ರ ನೀನೇ ತೆಗೆದದ್ದು. ಮಿಕ್ಕಿದ್ದು ನಾನು ತೆಗೆದದ್ದು ;-)

@ಶಿವು,
ವಿವರಣೆ ಮೆಚ್ಚಿದ್ದಕ್ಕೆ ಧನ್ಯವಾದ.
ಹೌದು, ಆರ್ ಕೆ ಶ್ರೀಕಂಠನ್ ಅವರ ಕಂಠಕ್ಕೆ ವಯಸ್ಸೇ ಆಗುವುದಿಲ್ಲವೇನೋ.

ಬಾಲು said...

nimma mele hotte kicchhu barthaa ide. :)

AntharangadaMaathugalu said...

ರಾಜೀವ್ ಅವರೇ...
ಈ ದಿನ ಗಾಯನ ಸಮಾಜದಲ್ಲಿ ನಾನು ಶ್ರೀ ಆರ್ ಕೆ ಶ್ರೀಕಂಠನ್ ಅವರ ಗಾಯನ ಕೇಳಿ ಬಂದೆ... ನಿಜವಾಗಿ ಅವರಿಗೆ ವಯಸ್ಸಾಗಿದೆಯೇ ಹೊರತು ಅವರ ಕಂಠಕ್ಕಲ್ಲ.. ಈಗಲೂ ಅದೇನು ಅಕಾರ ನುಡಿಸುತ್ತಾರೆ ಆ ಕಂಠದಲ್ಲಿ... ತಾರಕದ ’ಪ’ ಕೂಡ ಸ್ಪಷ್ಟವಾಗಿ, ನಿರಾಯಾಸವಾಗಿ ಹಿಡಿದು ನಿಲ್ಲಿಸುತ್ತಾರೆ. He is really great.... ಈಗ ನಿಮ್ಮ ಮೇಲೆ ಹೊಟ್ಟೆಕಿಚ್ಚಿಲ್ಲ... :-)
ಶ್ಯಾಮಲ

shivu.k said...

ಶ್ಯಾಮಲ ಮೇಡಮ್,

ನೀವು ಹೇಳಿದ ಹಾಗೆ ಶ್ರೀಕಂಠನ್ ಅವರ ಕಂಠಕ್ಕೆ ವಯಸ್ಸಾಗುವುದೇ ಇಲ್ಲ. ಅವತ್ತು ಗಾಯನ ಸಮಾಜದಲ್ಲಿ ಅವರ ಪೂರ್ತಿ ಕಾರ್ಯಕ್ರಮವನ್ನು ವಿಡಿಯೋ ಮಾಡಿದ್ದು ನಾನು ಕಳಿಸಿದ ನನ್ನ ವಿಡಿಯೋಗ್ರಾಪರ್. ಜುಗಲಬಂದಿಯಾಗಿ ಕಚೇರಿ ಕೊಟ್ಟ ಅವರ ಮಗ ರಮಾಕಾಂತ್ ಒಬ್ಬ ಉತ್ತಮ ಪ್ರಕೃತಿ ಛಾಯಾಗ್ರಾಹಕರೂ ಹೌದು. ಅವರು ನಿನ್ನೆ ಮತ್ತು ಇವತ್ತು[ಎರಡು ದಿನ ನಾನು ಮತ್ತು ಅವರು ಕೃಷ್ಣಮೃಗಗಳ ಫೋಟೊಗಳನ್ನು ತೆಗೆಯಲು ದೂರದ ಮೈದನಹಳ್ಳಿ ಆರಣ್ಯಕ್ಕೆ ಹೋಗಿದ್ದೆವು.]ಫೋಟೊ ತೆಗೆಯಲು ದೂರ ಹೋಗಿದ್ದೆವು. ಇವತ್ತು ವಾಪಸ್ಸು ಬಂದೆವು.
ನಿಮ್ಮ ಮಾತಿನಿಂದ ಇದೆಲ್ಲ ನೆನಪಾಯಿತು.

ರಾಜೀವ said...

@ಬಾಲು,
ಹೊಟ್ಟೆಕಿಚ್ಚು ಪಡಬೇಡ್ರಿ. ಅದರ ಶಾಪ ನನಗೆ ತಟ್ಟಿದರೆ ಕಷ್ಟ.

@ಶ್ಯಾಮಲ ಮೇಡಮ್,
ಸದ್ಯ. ಈಗ ಸ್ವಲ್ಪ ಸಮಾದಾನ. ಹೌದು ಆರ್.ಕೆ.ಎಸ್ ನಿಜವಾಗ್ಲೂ ಗ್ರೇಟ್.

@ಶಿವು,
ಸಕ್ಕತ್. ನಿಮ್ಮ ಛಾಯಾಗ್ರಹಕರ ಅನುಭವಗಳೇ ಒಂತರಾ ಭಿನ್ನವಾಗಿರುತ್ತದೆ. ವೃತ್ತಿಯನ್ನು ಮರೆತು ಮನೋರಂಜನೆಗಾಗಿ ನಾವು ಇವುಗಳನ್ನು (ಹಾಡು, ನೃತ್ಯ, ಚಾರಣ ..) ಮಾಡುತ್ತೇವೆ. ನಿಮಗೆ ಇವು ವೃತ್ತಿಯ ಭಾದವೇ ಆಗಿಹೋಗಿದೆ. ನೀವೇ ಧನ್ಯರು.